ADVERTISEMENT

ಕಲ್ಲಿದ್ದಲು: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಜ್ಯಕ್ಕೆ ವಿದ್ಯುತ್ ಮತ್ತು ಕಲ್ಲಿದ್ದಲು ಪೂರೈಸುವಲ್ಲಿ ಕೇಂದ್ರ  ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಪುರಭವನದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, `ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದರೂ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ. ರಾಜ್ಯಕ್ಕೆ 1,534 ಮೆಗಾವಾಟ್ ವಿದ್ಯುತ್ ನೀಡುವುದಾಗಿ  ಭರವಸೆ ನೀಡಿ,  950 ಮೆಗಾ ವಾಟ್ ಮಾತ್ರ ನೀಡಲಾಗುತ್ತಿದೆ~ ಎಂದು ದೂರಿದರು.

ಛತ್ತೀಸ್‌ಗಡದಿಂದ 200 ಮೆಗಾ ವಾಟ್ ವಿದ್ಯುತ್ ಖರೀದಿಸಲಾಗಿದೆ. ಆದರೆ ವಿದ್ಯುತ್ ಪ್ರಸರಣಕ್ಕೆ ವಿದ್ಯುತ್ ಕಾರಿಡಾರ್ ಲಭ್ಯವಿಲ್ಲ.

ಕೇಂದ್ರ ಸರ್ಕಾರ ಆಂಧ್ರಪ್ರದೇಶದ ವಿದ್ಯುತ್ ಬೇಡಿಕೆಗೆ ಆದ್ಯತೆ ನೀಡುತ್ತಿರುವುದರಿಂದ ರಾಜ್ಯಕ್ಕೆ ಕೇವಲ 16 ಮೆಗಾ ವಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಅವಕಾಶವಿದ್ದರೂ ಪೂರೈಕೆಗೆ ಕಾರಿಡಾರ್ ವ್ಯವಸ್ಥೆ ಇಲ್ಲದಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ ಎಂದು  ಹೇಳಿದರು.

ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು. ಶಾಸಕರಾದ ಬಿ.ಎನ್.ವಿಜಯ್‌ಕುಮಾರ್, ಸಿ.ಟಿ.ರವಿ, ಎಂ.ಶ್ರೀನಿವಾಸ್, ಎಂ. ಕೃಷ್ಣಪ್ಪ, ಸಂಸದರಾದ ಪಿ.ಸಿ. ಮೋಹನ್, ಅನಂತಕುಮಾರ್ ಹೆಗಡೆ, ಜಿ.ಎಂ.ಸಿದ್ದೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.