ADVERTISEMENT

ಕಲ್ಲು ಎತ್ತಿಹಾಕಿ ಪತ್ನಿ ಬರ್ಬರ ಹತ್ಯೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2012, 19:30 IST
Last Updated 3 ನವೆಂಬರ್ 2012, 19:30 IST

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ನಾಲ್ಕೂವರೆ ವರ್ಷದ ಮಗುವಿನ ಎದುರೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ರಾಜಗೋಪಾಲನಗರ ಸಮೀಪದ ಶ್ರೀಗಂಧನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಶ್ರೀಗಂಧನಗರ ನಿವಾಸಿ ಉಮಾ (24) ಕೊಲೆಯಾದವರು. ಅವರ ಪತಿ ಆರೋಪಿ ರಾಜಾಚಾರಿ (35) ಎಂಬಾತನನ್ನು ರಾಜಗೋಪಾಲನಗರ ಪೊಲೀಸರು ಘಟನೆ ನಡೆದ ಕೆಲವೇ ತಾಸುಗಳಲ್ಲಿ ಬಂಧಿಸಿದ್ದಾರೆ.
ಮೂಲತಃ ನಂಜನಗೂಡು ತಾಲ್ಲೂಕಿನ ಉಮಾ ಅವರ ವಿವಾಹವಾಗಿ ಸುಮಾರು ಏಳು ವರ್ಷಗಳಾಗಿದ್ದವು.

ದಂಪತಿಗೆ ಮಹದೇಶ್ ಎಂಬ ನಾಲ್ಕೂವರೆ ವರ್ಷದ ಮಗನಿದ್ದಾನೆ. ರಾಜಾಚಾರಿ ಪೇಂಟರ್ ಕೆಲಸ ಮಾಡುತ್ತಿದ್ದ. ಉಮಾ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಪತ್ನಿ ಬೇರೊಬ್ಬ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿರಬಹುದೆಂದು ಶಂಕಿಸಿ ರಾಜಾಚಾರಿ ಪ್ರತಿನಿತ್ಯ ಜಗಳವಾಡುತ್ತಿದ್ದ. ಇದೇ ವಿಷಯವಾಗಿ ಆತ, ಪತ್ನಿಯೊಂದಿಗೆ ರಾತ್ರಿ ಜಗಳವಾಡಿದ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ, ಮಗು ಮಹದೇಶ್ ಎದುರೇ ಉಮಾ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಂತರ ರಾಜಾಚಾರಿ ಕರೀಂಸಾಬ್ ಲೇಔಟ್‌ನಲ್ಲಿ ನಡೆದು ಹೋಗುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ರಾಜಗೋಪಾಲನಗರ ಠಾಣೆ ಹೆಡ್ ಕಾನ್‌ಸ್ಟೇಬಲ್ ವೆಂಕಟೇಶ್ ಮತ್ತು ಕಾನಸ್ಟೇಬಲ್ ರವಿ ಆತನನ್ನು ವಿಚಾರಣೆ ನಡೆಸಿದರು. ರಾಜಾಚಾರಿಯ ಬಟ್ಟೆ ಹಾಗೂ ಕಾಲಿನ ಮೇಲೆ ರಕ್ತದ ಕಲೆಗಳಿದ್ದ ಕಾರಣ ಅನುಮಾನಗೊಂಡ ಸಿಬ್ಬಂದಿ, ಆತನನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು. ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮಲ್ಲೇಶ್ವರ ರೈಲು ನಿಲ್ದಾಣದ ಕಡೆಗೆ ಹೋಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

`ಅಪ್ಪ ಅಮ್ಮನ ನಡುವೆ ರಾತ್ರಿ ಜಗಳವಾಯಿತು. ಆಗ ಅಪ್ಪ ಹೊರಗಿನಿಂದ ದೊಡ್ಡ ಕಲ್ಲು ತಂದು, ಅಮ್ಮನ ಕಾಲುಗಳ ಮೇಲೆ ಎತ್ತಿ ಹಾಕಿದರು. ಅಮ್ಮ ನೋವಿನಿಂದ ಕಿರುಚುತ್ತಾ ಕೆಳಗೆ ಬಿದ್ದಳು. ಮತ್ತೆ ಅದೇ ಕಲ್ಲನ್ನು ಎತ್ತಿ ತಲೆ ಮೇಲೆ ಹಾಕಿದರು. ಕೆಲ ಹೊತ್ತು ಒದ್ದಾಡಿ ಅಮ್ಮ ಸಾವನ್ನಪ್ಪಿದಳು~ ಎಂದು ಮಗು ಮಹದೇಶ್ ಹೇಳಿದ್ದಾಗಿ ರಾಜಗೋಪಾಲನಗರ ಪೊಲೀಸರು ತಿಳಿಸಿದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.