ADVERTISEMENT

ಕಸದ ಹಳ್ಳಕ್ಕೆ ಟ್ರ್ಯಾಕ್ಟರ್ -ವ್ಯಕ್ತಿ ಬಲಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 19:30 IST
Last Updated 14 ಆಗಸ್ಟ್ 2012, 19:30 IST

ಬೆಂಗಳೂರು: ಕಸ ಸುರಿಯುವ ಟ್ರಾಕ್ಟರ್ ಹಳ್ಳಕ್ಕೆ ಬಿದ್ದ ಪರಿಣಾಮ ಟ್ರಾಕ್ಟರ್‌ನಲ್ಲಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಡಿವಾಳದ ಗಾರ್ವೆಬಾವಿಪಾಳ್ಯ ಬಳಿಯ ಬಂಡೇಪಾಳ್ಯದಲ್ಲಿ ಮಂಗಳವಾರ ನಡೆದಿದೆ.
ಟ್ರಾಕ್ಟರ್‌ಗೆ ಕಸ ತುಂಬುವ ಕೆಲಸ ಮಾಡುತ್ತಿದ್ದ ಬಂಡೇಪಾಳ್ಯದ ನಿವಾಸಿ ಮಾರುತಿ (29) ಮೃತಪಟ್ಟವರು.

ಬಂಡೇಪಾಳ್ಯದಲ್ಲಿರುವ ಹಳೆಯದಾದ ಕಲ್ಲಿನ ಕ್ವಾರಿಯಲ್ಲಿ ಕೊಳಚೆ ನೀರು ನಿಂತಿದ್ದು ಅಕ್ಕಪಕ್ಕದ ಬಡಾವಣೆಗಳಿಂದ ಕಸವನ್ನು ತಂದು ಹಳ್ಳಕ್ಕೆ ಸುರಿಯಲಾಗುತ್ತಿದೆ. ಮಂಗಳವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆಗೆ ಹಳ್ಳಕ್ಕೆ ಕಸ ಸುರಿಯಲು ಬಂದ ಟ್ರಾಕ್ಟರ್ ಕಸ ಸುರಿಯುವ ಸಂದರ್ಭದಲ್ಲಿ ಹಿಮ್ಮುಖವಾಗಿ ಹಳ್ಳಕ್ಕೆ ಮಗುಚಿ ಬಿದ್ದಿದೆ.

ಘಟನೆ ವೇಳೆ ಚಾಲಕ ಸೇರಿದಂತೆ ಇತರೆ ಮೂವರು ಟ್ರಾಕ್ಟರ್‌ನಿಂದ ಜಿಗಿದು ಪಾರಾಗಿದ್ದಾರೆ. ಟ್ರಾಕ್ಟರ್‌ನ ಹಿಂದೆ ಸಿಲುಕಿದ ಮಾರುತಿ ಹಳ್ಳದ ಕೊಳಚೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಕ್ರೇನ್‌ನ ಸಹಾಯದಿಂದ ಟ್ರಾಕ್ಟರ್ ಅನ್ನು ಹಳ್ಳದಿಂದ ಮೇಲೆಕ್ಕೆ ಎತ್ತಲಾಯಿತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ  ಮೃತದೇಹವನ್ನು ಮೇಲೆತ್ತಿದ್ದಾರೆ.

ಮಹಿಳೆ ಕೊಲೆ
ಮನೆಗೆಲಸದ ವಿಷಯವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಕೋರಮಂಗಲ 3ನೇ ಹಂತದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಜಮುನಾದೇವಿ (45) ಕೊಲೆಯಾದ ಮಹಿಳೆ. ಕೊಲೆಯ ಆರೋಪಿ ಶಿಬಾನಂದ ಜೈನ್ ಘಟನೆ ನಂತರ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಜಮುನಾದೇವಿ ಒಂದೂವರೆ ವರ್ಷದಿಂದ ಕೋರಮಂಗಲದ ಉದ್ಯಮಿ ಜೆ.ಎನ್.ಡಾಗಾ ಎಂಬುವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು. ಇದೇ ಮನೆಯಲ್ಲಿ ಶಿಬಾನಂದ ಜೈನ್ ಕೂಡಾ ಮನೆ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ಮನೆ ಸ್ವಚ್ಛ ಮಾಡುವ ವಿಷಯವಾಗಿ ಇಬ್ಬರ  ನಡುವೆ ಜಗಳ ಆರಂಭವಾಗಿದೆ.
 
ಈ ವೇಳೆ ಕೋಪಗೊಂಡ ಶಿಬಾನಂದ ಜೈನ್ ಕೈಗೆ ಸಿಕ್ಕ ಚಾಕುವಿನಿಂದ ಆಕೆಯ ಕತ್ತು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಕೋರಮಂಗಲ ಪೊಲೀಸರು ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.