ADVERTISEMENT

ಕಸಾಪ ಚುನಾವಣೆ: ಅಭ್ಯರ್ಥಿಗಳಿಂದ ಪ್ರಣಾಳಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:45 IST
Last Updated 25 ಮಾರ್ಚ್ 2012, 19:45 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ನ್ಯಾಯಕ್ಕೆ ಆದ್ಯತೆ ನೀಡುವುದು, ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದು ತಮ್ಮ ಗುರಿ ಎಂದು ಪರಿಷತ್ತಿನ ಚುನಾವಣೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದ್ದಾರೆ.

ಕನ್ನಡದ ಹಿತಾಸಕ್ತಿ ರಕ್ಷಣೆಯ ಉದ್ದೇಶದಿಂದ ಪರಿಷತ್ತನ್ನು ಬಲಪಡಿಸುವುದು, ಕನ್ನಡ ಚಳವಳಿಗೆ ಸೈದ್ಧಾಂತಿಕ ಮತ್ತು ವೈಚಾರಿಕ ಆಯಾಮ ನೀಡುವುದು ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿರುವ ಅವರ ಪ್ರಣಾಳಿಕೆಯಲ್ಲಿ ಸೇರಿವೆ. ಚಂಪಾ ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ `ಪುಸ್ತಕ ಸಂತೆ~ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡುವುದು, ಇದನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವುದು, ಪರಿಷತ್ತಿನ ಪತ್ರಿಕೆಗಳಿಗೆ ಹೊಸ ರೂಪ ನೀಡುವುದು, ಪ್ರತ್ಯೇಕ ಪ್ರಸಾರಾಂಗ ಸ್ಥಾಪನೆ, ನಿಘಂಟು ಪರಿಷ್ಕರಿಸುವುದು, ಸಾಹಿತ್ಯ ಸಮ್ಮೇಳನಕ್ಕೆ ದಟ್ಟ ಸಾಹಿತ್ಯಕ ಛಾಯೆ ತರಲು ವಿಶೇಷ ಕಾರ್ಯಕ್ರಮ ರೂಪಿಸುವುದು ಪ್ರಣಾಳಿಕೆಯಲ್ಲಿದೆ. ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆಯನ್ನು ಈಗಿರುವ 1.25 ಲಕ್ಷದಿಂದ ಮೂರು ಲಕ್ಷಕ್ಕೆ ಹೆಚ್ಚಿಸುವುದು ಚಂಪಾ ಅವರ ಪ್ರಣಾಳಿಕೆಯ ಕೆಲವು ಅಂಶಗಳು.

ಹಾಲಂಬಿ ಪ್ರಣಾಳಿಕೆ: ಅಧ್ಯಕ್ಷ ಸ್ಥಾನದ ಇನ್ನೊಬ್ಬ ಆಕಾಂಕ್ಷಿ ಪುಂಡಲೀಕ ಹಾಲಂಬಿ ಅವರೂ ತಮ್ಮ ಪ್ರಣಾಳಿಕೆಯನ್ನು ಪರಿಷತ್ತಿನ ಆಜೀವ ಸದಸ್ಯರಿಗೆ ಈಗಾಗಲೇ ರವಾನಿಸಿದ್ದಾರೆ. ಪ್ರಾದೇಶಿಕ, ಸಾಮಾಜಿಕ ಮತ್ತು ಪ್ರತಿಭಾ ನ್ಯಾಯದ ಆಧಾರದಲ್ಲಿ ರಿಷತ್ತಿನ ಚಟುವಟಿಕೆಗಳನ್ನು ಮುನ್ನಡೆಸುವುದು ತಮ್ಮ ಆದ್ಯತೆ ಎಂದು ಅವರು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡಿರುವ ವಿವಿಧ ನಿರ್ಣಯಗಳ ಅನುಷ್ಠಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗೆ ವಿಶೇಷ ಗಮನ ನೀಡುವುದು ಹಾಲಂಬಿ ಅವರ ಪ್ರಣಾಳಿಕೆಯಲ್ಲಿದೆ.

`ಪರಿಷತ್ತಿನ ಆರ್ಥಿಕ ವ್ಯವಹಾರಗಳಲ್ಲಿ ಹೆಚ್ಚಿನ ಶಿಸ್ತು ತರುವುದು ಹಾಗೂ ಸಂಸ್ಥೆಯನ್ನು ಆರ್ಥಿಕವಾಗಿ ಸುಧೃಡವಾಗಿಸುವುದೂ ನನ್ನ ಪ್ರಣಾಳಿಕೆಯಲ್ಲಿದೆ. ನಾನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಗೌರವ ಸಂಭಾವನೆ, ಸಭಾ ಭತ್ಯೆ ಮತ್ತು ದೂರವಾಣಿ ವೆಚ್ಚ ಸ್ವೀಕರಿಸುವುದಿಲ್ಲ. ಇದರಿಂದ ಪರಿಷತ್ತಿಗೆ ಮೂರು ವರ್ಷದಲ್ಲಿ ಅಂದಾಜು ಎಂಟು ಲಕ್ಷ ರೂ ಉಳಿತಾಯವಾಗುತ್ತದೆ~ ಎಂದು ಹಾಲಂಬಿ `ಪ್ರಜಾವಾಣಿ~ಗೆ ತಿಳಿಸಿದರು.

ಜಯಪ್ರಕಾಶ ಗೌಡ: ಕನ್ನಡದ ಪ್ರಮುಖ ವಿದ್ವಾಂಸರನ್ನು ಪರಿಷತ್ತಿನ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು, ಜನಪದ ಸಾಹಿತ್ಯ ಹಾಗೂ ಕಲೆಯ ಪ್ರದರ್ಶನಗಳಿಗೆ ವಿಶೇಷ ಆದ್ಯತೆ ನೀಡುವ ಚಟುವಟಿಕೆಗಳನ್ನು ಆಯೋಜಿಸುವುದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಬಿ. ಜಯಪ್ರಕಾಶ ಗೌಡ ಅವರ ಪ್ರಣಾಳಿಕೆಯಲ್ಲಿ ಸೇರಿದೆ.

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಗೌಡರು, ಜಾನಪದ ವಿಶ್ವಕೋಶ ಹಾಗೂ ನಿಘಂಟು ಪರಿಷ್ಕರಣೆ, ವಿಮರ್ಶೆ, ಮೀಮಾಂಸೆ, ಛಂದಸ್ಸು ಮುಂತಾದ ಸಾಹಿತ್ಯ ಸಂಬಂಧಿ ಗ್ರಂಥಗಳನ್ನು ಪ್ರಕಟಿಸುವುದು ಅವರ ಪ್ರಣಾಳಿಕೆಯಲ್ಲಿರುವ ಕೆಲವು ಅಂಶಗಳು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪರಿಷತ್ತಿನ ಭವನ ನಿರ್ಮಾಣ, ಪ್ರಾದೇಶಿಕ ಪದಕೋಶಗಳ ಪ್ರಕಟಣೆ, ಪರಿಷತ್ತಿನ ಸಂಶೋಧನಾ ವಿಭಾಗವನ್ನು ಇನ್ನಷ್ಟು ಚುರುಕುಗೊಳಿಸುವುದು ಗೌಡರ ಗುರಿ.

ಅಶೋಕ: ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸಿರುವ ಚಿತ್ರನಟ ಅಶೋಕ ಅವರು, ಕನ್ನಡವನ್ನು ಆಡಳಿತ ಭಾಷೆಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

2014ರ ಮೇ ತಿಂಗಳಿನಲ್ಲಿ ಆರಂಭವಾಗುವ ಕಸಾಪ ಶತಮಾನೋತ್ಸವದ ನೆನಪಿಗಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಗುಲ್ಬರ್ಗಗಳಲ್ಲಿ ಶತಮಾನೋತ್ಸವ ಗ್ರಾಮ ನಿರ್ಮಿಸಿ, ಕನ್ನಡ ಕುರಿತ ಸಂಶೋಧನೆ, ಅಭಿವೃದ್ಧಿ ಕಾರ್ಯಗಳು ಅಲ್ಲಿ ನಿರಂತರ ನಡೆಯುವ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನುವುದು ಅವರ ಪ್ರಣಾಳಿಕೆಯ ಪ್ರಮುಖ ಅಂಶಗಳಲ್ಲಿ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.