ADVERTISEMENT

ಕಸ್ಟಮ್ಸ್‌ ಅಧಿಕಾರಿ ಸೋಗಿನಲ್ಲಿ ₹2.72 ಲಕ್ಷ ವಂಚನೆ

ಯುವತಿ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆಗೆದು ಹಾದಿ ತಪ್ಪಿಸಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST

ಬೆಂಗಳೂರು: ಕಸ್ಟಮ್ಸ್‌ ಅಧಿಕಾರಿಗಳ ಸೋಗಿನಲ್ಲಿ ನಗರದ ನಿವಾಸಿ ಸುಧೀರ್‌ ಎಂಬುವರಿಗೆ ಕರೆ ಮಾಡಿದ್ದ ವ್ಯಕ್ತಿಗಳಿಬ್ಬರು, ₹2.72 ಲಕ್ಷ ಪಡೆದು ವಂಚಿಸಿದ್ದಾರೆ. ಈ ಸಂಬಂಧ ಸೈಬರ್‌ ಕ್ರೈಂ ಠಾಣೆಗೆ ಸುಧೀರ್‌ ದೂರು ನೀಡಿದ್ದಾರೆ.

ದೂರುದಾರರಿಗೆ ಫೇಸ್‌ಬುಕ್‌ನಲ್ಲಿ ಅಮೆರಿಕದ ನಿವಾಸಿ ಜೂಲಿಯೆಟ್ ಸೊಲೊಮನ್ ಎಂಬುವರ ಪರಿಚಯವಾಗಿತ್ತು. ಅವರಿಬ್ಬರು ಆನ್‌ಲೈನ್‌ನಲ್ಲಿ ವೆಬ್‌ ಚಾಟಿಂಗ್‌ ಮೂಲಕ ಹಲವು ಬಾರಿ ಮಾತನಾಡಿದ್ದರು.

ಸಂಗೀತಾ ಕುಮಾರಿ ಎಂಬ ಹೆಸರು ಹೇಳಿಕೊಂಡು ಮಾರ್ಚ್‌ 12ರಂದು ಕರೆ ಮಾಡಿದ್ದ ಯುವತಿಯೊಬ್ಬಳು, ‘ನಾನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಳು. ನಂತರ, ‘ಅಮೆರಿಕದಲ್ಲಿರುವ ನಿಮ್ಮ ಸ್ನೇಹಿತೆ ಜೂಲಿಯೆಟ್ ಮುಂಬೈಗೆ ಬಂದಿದ್ದಾರೆ. ಅವರ ಬಳಿ 35 ಸಾವಿರ ಡಾಲರ್‌ ಹಣವಿದೆ. ಅದನ್ನು ನಾವು ಜಪ್ತಿ ಮಾಡಿದ್ದೇವೆ’ ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.

ADVERTISEMENT

‘ನಿಮ್ಮ ಮೊಬೈಲ್ ನಂಬರ್‌ ಅನ್ನು ಜೂಲಿಯೆಟ್ ಅವರೇ ಕೊಟ್ಟಿದ್ದಾರೆ. 35 ಸಾವಿರ ಡಾಲರ್‌ ಬಿಡುಗಡೆಗೆ ನೀವು ಶುಲ್ಕ ಪಾವತಿ ಮಾಡಬೇಕು’ ಎಂದು ತಿಳಿಸಿದ್ದಳು. ಎಸ್‌ಬಿಐ ಹಾಗೂ ಇತರೆ ಬ್ಯಾಂಕ್‌ಗಳಲ್ಲಿ ಜಾನ್‌ ಹೆಸರಿನಲ್ಲಿದ್ದ ಖಾತೆಯ ವಿವರ ನೀಡಿದ್ದಳು. ಅದನ್ನು ನಂಬಿದ್ದ ಸುಧೀರ್‌, ಯುವತಿ ನೀಡಿದ್ದ ಖಾತೆಗಳಿಗೆ ಒಟ್ಟು ₹2.72 ಲಕ್ಷ ಜಮೆ ಮಾಡಿದ್ದರು.

ಮರುದಿನ ಸಂಗೀತಾ ಕುಮಾರಿಗೆ ಸುಧೀರ್‌ ಕರೆ ಮಾಡಿದಾಗ ಆಕೆಯ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಅವಾಗಲೇ ವಂಚನೆಗೆ ಒಳಗಾಗಿದ್ದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ವಿವರಿಸಿದರು.

ಯುವತಿಯ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆರೆದಿದ್ದ ಆರೋಪಿಗಳು, ಅದರ ಮೂಲಕ ದೂರುದಾರರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರು. ನಂತರ ಮಾತುಕತೆ ನಡೆಸಿ ವಂಚನೆ ಎಸಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.