ADVERTISEMENT

ಕಾಂಗ್ರೆಸ್‌ ಕಾರ್ಯಕರ್ತ ಕೊಲೆ ಪ್ರಕರಣ: ಹಂತಕರಿಗೆ ಜೀವಾವಧಿ ಶಿಕ್ಷೆ,₹75 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ವಾಸುದೇವ್
ವಾಸುದೇವ್   

ಬೆಂಗಳೂರು: ಮಡಿವಾಳದ ಸಿದ್ದಾರ್ಥ ಕಾಲೊನಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಕಾರ್ಯಕರ್ತ ವೆಂಕಟೇಶಪ್ಪ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ, ಜೀವಾವಧಿ ಶಿಕ್ಷೆ ಹಾಗೂ ₹ 75 ಸಾವಿರ ದಂಡ ವಿಧಿಸಿ ನಗರದ 67ನೇ ಸಿಸಿಎಚ್ ನ್ಯಾಯಾಲಯ ಮಂಗಳವಾರ ಆದೇಶಿಸಿತು.

ಸಿದ್ದಾರ್ಥ ಕಾಲೊನಿಯ ವೆಂಕಟೇಶಪ್ಪ, 2014ರ ಸೆ.22ರ ರಾತ್ರಿ 12.15ರ ಸುಮಾರಿಗೆ ಸ್ನೇಹಿತ ಮಾದೇಶ್ ಜತೆ ಮನೆ ಸಮೀಪ ನಡೆದು ಹೋಗುತ್ತಿದ್ದರು.

ಈ ವೇಳೆ ಅವರ ಮೇಲೆರಗಿದ್ದ ವಾಸುದೇವ್ ಹಾಗೂ ಮುನಿರಾಜು, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಮಾದೇಶ್‌ ಮೇಲೂ ಹಲ್ಲೆ ನಡೆಸಿದ್ದರು.

ADVERTISEMENT

ಕೊಲೆ (ಐಪಿಸಿ 302) ಹಾಗೂ ಕೊಲೆ ಯತ್ನ (307) ಆರೋಪಗಳಡಿ ಇಬ್ಬರನ್ನೂ ಬಂಧಿಸಿದ್ದ ಮಡಿವಾಳ ಪೊಲೀಸರು, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.


ದೇವರಾಜ್

ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ಪಾಟೀಲ್, ‘ಆರೋಪಿಗಳಿಬ್ಬರೂ ರೌಡಿಗಳು. ಎರಡು ಕೊಲೆ ಪ್ರಕರಣಗಳು ಸೇರಿದಂತೆ ವಾಸುದೇವ್ ವಿರುದ್ಧ 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಹಿಂದೆ ಜೈಲಿಗೆ ಹೋಗಿದ್ದರೂ, ಜಾಮೀನಿನ ಮೇಲೆ ಬಿಡುಗಡೆಯಾಗಿ ಪುನಃ ಉಪಟಳ ಮುಂದುವರಿಸಿದ್ದರು’ ಎಂದು ವಾದ ಮಂಡಿಸಿದರು.

‘ಇಬ್ಬರೂ ರೌಡಿ ಚಟುವಟಿಕೆ ಮೂಲಕ ಸಿದ್ದಾರ್ಥ ಕಾಲೊನಿ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದರು. ಜನರ ಪರ ನಿಂತಿದ್ದ ವೆಂಕಟೇಶಪ್ಪ, ಈ ರೌಡಿಗಳ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದರು. ಇದರಿಂದ ಕುಪಿತಗೊಂಡ ಆರೋಪಿಗಳು, ವ್ಯವಸ್ಥಿತವಾಗಿ ಸಂಚು ರೂಪಿಸಿ ಅವರನ್ನು ಹತ್ಯೆಗೈದಿದ್ದರು. ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ರಕ್ತಸಿಕ್ತ ಬಟ್ಟೆಗಳು ವಾಸುದೇವ್‌ ಮನೆಯಲ್ಲೇ ಸಿಕ್ಕಿವೆ. ಪ್ರತ್ಯಕ್ಷದರ್ಶಿಗಳು ಸೇರಿದಂತೆ 31 ಸಾಕ್ಷಿಗಳು ಹೇಳಿಕೆ ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಧೀಶ ವಿಜಯನ್ ಈ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.