ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿವೆ. ಇದು ಮುಂಬರುವ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಿಜೆಪಿಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದರೂ ಸರ್ವಾನುಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದ ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ~ ಎಂದು ವ್ಯಂಗ್ಯವಾಡಿದರು.
`ಬಿಜೆಪಿಯಲ್ಲಿ ಗೊಂದಲಗಳು ಇರುವುದು ನಿಜ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ನಮ್ಮ ಹಂತದಲ್ಲೇ ಬಗೆಹರಿಸಿಕೊಳ್ಳುತ್ತೇವೆ. ಹೈಕಮಾಂಡ್‌ವರೆಗೂ ತೆಗೆದುಕೊಂಡು ಹೋಗುವುದಿಲ್ಲ. ರಾಜ್ಯಮಟ್ಟದ ನಾಯಕರೇ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಕಾಂಗ್ರೆಸ್‌ನ ಹಾಗೆ ನಮ್ಮಲ್ಲಿ ಲಕೋಟೆ ಸಂಸ್ಕೃತಿ ಇಲ್ಲ~ ಎಂದು ಕುಟುಕಿದರು.
ಗೆಲುವಿನ ವಿಶ್ವಾಸ: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, `ಪಕ್ಷದ ಆರೂ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ. ಹೆಚ್ಚುವರಿ ಮತಗಳನ್ನು ನಮ್ಮ ಪಕ್ಷದ ಅಭ್ಯರ್ಥಿಗಳಿಗೇ ಹಂಚಿಕೆ ಮಾಡಬೇಕು. ಬೇರೆ ಯಾರಿಗೂ ನೀಡಬಾರದು ಎಂದು ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಈಗಾಗಲೇ ತೀರ್ಮಾನವಾಗಿದೆ~ ಎಂದರು.
`ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಇದೇ 10ರಂದು ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲೂ ಬಿಜೆಪಿ ಜಯ ಗಳಿಸಲಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ~ ಎಂದು ಅವರು ತಿಳಿಸಿದರು.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಸಚಿವರಾದ ಎಸ್. ಸುರೇಶ್ ಕುಮಾರ್, ಗೋವಿಂದ ಕಾರಜೋಳ, ರೇವೂ ನಾಯಕ ಬೆಳಮಗಿ, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಪಕ್ಷದ ಮುಖಂಡರು, ಶಾಸಕರು ಹಾಜರಿದ್ದರು.
ಪಕ್ಷದ ತೀರ್ಮಾನ ರೇವಣ್ಣ
ಬೆಂಗಳೂರು: `ಬಿಜೆಪಿ, ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಆ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ದೃಷ್ಟಿಯಿಂದ ಪಕ್ಷೇತರ ಅಭ್ಯರ್ಥಿ ಬಿ.ಎಸ್. ಸುರೇಶ್ ಅವರಿಗೆ ನಮ್ಮ ಪಕ್ಷದ ಹೆಚ್ಚುವರಿ ಮತಗಳನ್ನು ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ~ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ತಿಳಿಸಿದರು.
`ಕಾಂಗ್ರೆಸ್ ಇದುವರೆಗೆ ನಮ್ಮ ಪಕ್ಷದ ಬೆಂಬಲ ಕೇಳಿಲ್ಲ. ಕುರುಬ ಸಮಾಜದ ಯುವಕ ಬಿ.ಎಸ್. ಸುರೇಶ್ ಅವರು ಜೆಡಿಎಸ್ ಮುಖಂಡರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಹಿಂದುಳಿದ ವರ್ಗದ ಯುವಕನಿಗೆ ಅವಕಾಶ ಸಿಗಲಿ ಎಂಬ ದೃಷ್ಟಿಯಿಂದ ಪಕ್ಷದ ಹೆಚ್ಚುವರಿ ಮತಗಳನ್ನು ಅವರಿಗೆ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ~ ಎಂದರು.
ಸೈಯದ್ ಮುದೀರ್ ಆಗಾ ಅವರ ತಂದೆ ಸೈಯದ್ ಅಹ್ಮದ್ ಆಗಾ 1962ರಿಂದಲೂ ಪಕ್ಷದಲ್ಲಿದ್ದರು. ರಾಮಕೃಷ್ಣ ಹೆಗಡೆ ಸರ್ಕಾರ ಇದ್ದಾಗಲೇ ಅಹ್ಮದ್ ಆಗಾ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನ ನಡೆದಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರಿ ಮುದೀರ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.
ಶಾಸಕರಾದ ಅನಿತಾ ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಜಮೀರ್ ಅಹ್ಮದ್, ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.