ADVERTISEMENT

ಕಾಡು ಬೆಳೆಸಲು 100 ಎಕರೆ ಮೀಸಲಿಡಿ

‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯ ಬೇಡಿಕೆ ಮಂಡಿಸಿದ ವಿಜ್ಞಾನಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ (ಎಡದಿಂದ ಎರಡನೆಯವರು), ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ    ಹಾಗೂ ಗಂಜಾಂ ಮಠದ ಚಿದ್ಘನ ಸ್ವಾಮೀಜಿ ಗಿಡಕ್ಕೆ ನೀರೆರೆದರು. ವಿಜ್ಞಾನಿ ಹರೀಶ್‌ ಆರ್‌.ಭಟ್‌ ಇದ್ದಾರೆ. – ಪ್ರಜಾವಾಣಿ ಚಿತ್ರ
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ (ಎಡದಿಂದ ಎರಡನೆಯವರು), ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ಗಂಜಾಂ ಮಠದ ಚಿದ್ಘನ ಸ್ವಾಮೀಜಿ ಗಿಡಕ್ಕೆ ನೀರೆರೆದರು. ವಿಜ್ಞಾನಿ ಹರೀಶ್‌ ಆರ್‌.ಭಟ್‌ ಇದ್ದಾರೆ. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮನೆಯ ಅಕ್ಕಪಕ್ಕ ಗಿಡ ನೆಟ್ಟರೆ ಅಭಿವೃದ್ಧಿಯ ಹೆಸರಿನಲ್ಲಿ ಅದನ್ನು ಕಡಿಯಲಾಗುತ್ತದೆ. ಅದರ ಬದಲು  ಕಾಡು ಬೆಳೆಸಲೆಂದೇ ನಗರದ ಸಮೀಪದಲ್ಲಿ 100 ಎಕರೆ ಮೀಸಲಿಡಬೇಕು’.

ನಗರದ ವಿದ್ಯಾರ್ಥಿಯೊಬ್ಬ ನೀಡಿದ ಸಲಹೆ ಇದು. ಗಿಡ ನೆಡುವ ವಿಚಾರದಲ್ಲಿ ಆ ವಿದ್ಯಾರ್ಥಿ ಎದುರಿಸಿದ ಸಂಕಷ್ಟವನ್ನು ಪರಿಸರ ವಿಜ್ಞಾನಿ ಹರೀಶ್‌ ಆರ್‌.ಭಟ್‌ ಹಂಚಿಕೊಂಡರು.

ಬಸವ ಕೇಂದ್ರ ಹಾಗೂ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಬುಧವಾರ ಇಲ್ಲಿ ಏರ್ಪಡಿಸಿದ್ದ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಅವರು ‘ಇರುವುದೊಂದೇ ಭೂಮಿ– ಆಗದಿರಲಿ ಮರುಭೂಮಿ’ ವಿಷಯದ ಕುರಿತು ಮಾತನಾಡಿದರು.

ADVERTISEMENT

‘ವಿಶ್ವ ಪರಿಸರ ದಿನಾಚರಣೆಯಂದು ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಮಾವಿನ ಗಿಡ ಕೊಟ್ಟರು. ಫ್ಲ್ಯಾಟ್‌ನಲ್ಲಿರುವ ಆತ ಅದನ್ನು ಸ್ವೀಕರಿಸಲು ನಿರಾಕರಿಸಿದ. ಫ್ಲ್ಯಾಟ್‌ ಸಮೀಪದಲ್ಲೇ ಎಲ್ಲಾದರೂ ನೆಡುವಂತೆ ನಾನು ಸಲಹೆ ನೀಡಿದ್ದೆ. ಮೂರು ತಿಂಗಳು ಜತನವಾಗಿ ಬೆಳೆಸಿದ್ದ  ಆ ಗಿಡವನ್ನು ರಸ್ತೆ ವಿಸ್ತರಣೆ ಸಲುವಾಗಿ ಕಡಿದರು. ಆಗ ಸಿಟ್ಟಿನಿಂದ ನನಗೆ ಕರೆ ಮಾಡಿದ ವಿದ್ಯಾರ್ಥಿ, ಈ ಮಾತನ್ನು ಹೇಳಿದ್ದ’ ಎಂದು ಅವರು ಮೆಲುಕು ಹಾಕಿದರು.

‘ವಿದ್ಯಾರ್ಥಿಯ ಮಾತಿನಲ್ಲಿ ಅರ್ಥವಿದೆ. ನಾವು ತೋರಿಕೆಗೆ ಗಿಡ ನೆಡುವುದನ್ನು ನಿಲ್ಲಿಸಬೇಕು. ಪರಿಸರವನ್ನು ಉಳಿಸುವ ನಿಜವಾದ ಕಾಳಜಿ ಇದ್ದರೆ, ಉಣ್ಣುವ ಅನ್ನವನ್ನು ವ್ಯರ್ಥ ಮಾಡಬೇಡಿ. ನೀರನ್ನು ಪೋಲು ಮಾಡಬೇಡಿ’ ಎಂದು ಸಲಹೆ ನೀಡಿದರು.

‘ನೆಲಗಡಲೆ ಯಾವ ಮರದಲ್ಲಿ ಬೆಳೆಯುತ್ತದೆ ಎಂದು ನಗರದ ವಿದ್ಯಾರ್ಥಿಗಳು ಮಾತ್ರ ಅಲ್ಲ, ಅವರ ಪೋಷಕರೂ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.  ಹಾಲು ಹೇಗೆ ಉತ್ಪಾದನೆಯಾಗುತ್ತದೆ ಎಂಬುದು ಬಹುತೇಕ ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಪರಿಸರದ ನಂಟನ್ನು ಕಳೆದುಕೊಂಡಿದ್ದರ ಪರಿಣಾಮ ಇದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಸರದ ಜೊತೆ ನಂಟನ್ನು ಮತ್ತೆ ಬೆಸೆಯಬೇಕು. ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ವಿಚಾರದಲ್ಲಿ ಸಮತೋಲನ ಸಾಧಿಸಬೇಕು. ಹಾಗೆ ಮಾಡಿದರೆ ಮಾತ್ರ ಭೂಮಿಯ ಅವಸಾನವನ್ನು ಒಂದಷ್ಟು ಮುಂದೂಡಬಹುದು’ ಎಂದರು.

‘ಗುಬ್ಬಚ್ಚಿ ಹಾಗೂ ಕಾಗೆಗಳು ವಾಸಿಸುವ ಜಾಗ ಮನುಷ್ಯನ ವಾಸಕ್ಕೂ ಯೋಗ್ಯ. ಎಲ್ಲಿ ಇಂತಹ ಪಕ್ಷಿಗಳು ಕಾಣಿಸಿಕೊಳ್ಳುವುದಿಲ್ಲವೋ ಆ ಪ್ರದೇಶ ಮನುಷ್ಯನ ವಾಸಕ್ಕೂ ಯೋಗ್ಯವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.