ಬೆಂಗಳೂರು: `ಲೇಖಕನ ಪಾಲಿಗೆ ಕಾದಂಬರಿ ಎಂದರೆ ಖಯಾಲ್, ಅಂಕಣ ಎಂದರೆ ಸಿನಿಮಾ ಗೀತೆ ಮತ್ತು ಪ್ರಬಂಧ ಎಂದರೆ ಅದೇ ಟುಮ್ರಿ'
-ಹೀಗೆಂದು ವ್ಯಾಖ್ಯಾನಿಸಿದವರು ಪ್ರಖ್ಯಾತ ಅಂಕಣಕಾರ ಡಾ. ರಾಮಚಂದ್ರ ಗುಹಾ. ನಗರದ ಸಪ್ನಾ ಬುಕ್ ಹೌಸ್‌ನಲ್ಲಿ ಬುಧವಾರ ಸಂಜೆ ತಮ್ಮ `ಪೇಟ್ರಿಯಾಟ್ಸ್ ಅಂಡ್ ಪಾರ್ಟಿಸ್ಯಾನ್ಸ್' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಈ ಕೃತಿಯನ್ನು ಪೆಂಗ್ವಿನ್ ಬುಕ್ಸ್ ಇಂಡಿಯಾ ಪ್ರಕಾಶನ ಸಂಸ್ಥೆ ಹೊರ ತಂದಿದೆ.
`ಪತ್ರಿಕೆಗಳಿಗೆ ಅಂಕಣ ಬರೆಯುವುದು ಇತರ ಸಾಹಿತ್ಯ ಪ್ರಕಾರದಲ್ಲಿ ಕೃಷಿ ಮಾಡಿದಷ್ಟು ಸುಲಭ ಅಲ್ಲ. ಅಲ್ಲಿರುವ ಶಬ್ದಗಳ ಮಿತಿ ಕೇವಲ 800. ಕಡಿಮೆ ಪದಗಳಲ್ಲೇ ಜಾಸ್ತಿ ಹೇಳಬೇಕು. ಮಾಹಿತಿ ಕಲೆ ಹಾಕಬೇಕು. ಅದರಲ್ಲೇ ಒಂದು ಕಥೆ ಹೆಣೆಯಬೇಕು. ಹೇಳುವ ವಿಷಯ ಸ್ಪಷ್ಟವಾಗಿರಬೇಕು. ವಾದಕ್ಕೆ ತಕ್ಕ ಸಾಕ್ಷ್ಯ ಒದಗಿಸಬೇಕು ಮತ್ತು ಇದೆಲ್ಲವನ್ನೂ ಕಾಲಮಿತಿಯಲ್ಲಿ ಸಿದ್ಧಪಡಿಸಿ ಕೊಡಬೇಕು' ಎಂದು ವಿಶ್ಲೇಷಿಸಿದರು.
`ಪೇಟ್ರಿಯಾಟ್ಸ್ ಅಂಡ್ ಪಾರ್ಟಿಸ್ಯಾನ್ಸ್' ರಾಜಕೀಯ ಮತ್ತು ಸಾಹಿತ್ಯಿಕ ಪ್ರಬಂಧಗಳನ್ನು ಒಳಗೊಂಡ ಕೃತಿಯಾಗಿದೆ. ಕಳೆದ 30 ವರ್ಷಗಳಲ್ಲಿ ಪ್ರವಾಸದಿಂದ ಪಡೆದ ಅನುಭವ, ಸಂವಾದ, ಅಧ್ಯಯನ, ಸಂಶೋಧನೆ, ಸಂದರ್ಶನ ಮತ್ತು ಸಮೀಪದಿಂದ ಕಂಡ ಸತ್ಯ ದರ್ಶನದ ಮೂಸೆಯಿಂದ ಅರಳಿದ ಪ್ರಬಂಧಗಳು ಇವು' ಎಂದು ಹೇಳಿದರು.
`ನಾನು ಮೊದಲ ಪ್ರಬಂಧ ಬರೆದಿದ್ದು 20 ವರ್ಷಗಳ ಹಿಂದೆ. ಸಂಗೀತಗಾರ್ತಿಯೊಬ್ಬಳು ಸಾಧನೆ ಮಾಡುತ್ತಾ ತನ್ನ ಶಾರೀರದಲ್ಲಿ ಮಾಧುರ್ಯ ತುಂಬಿದಂತೆ, ಬರೆಯುತ್ತಾ ಹೋದಂತೆ ನನ್ನ ಬರವಣಿಗೆಗಳೂ ಅರ್ಥವಂತಿಕೆ ಪಡೆಯುತ್ತಾ ಸಾಗಿದವು. ಸ್ವಾತಂತ್ರ್ಯದ ಅಭಿವ್ಯಕ್ತಿಯೇ ನನ್ನ ಬರವಣಿಗೆ ವಿಶೇಷ ಗುಣವಾಗಿದೆ' ಎಂದು ತಿಳಿಸಿದರು.
ಅಲ್ಲಿಂದ ಗುಹಾ ಮಾತು ದೇಶದ ಕಡೆಗೆ ಹೊರಳಿತು. `ದೇಶದಲ್ಲಿ ಎರಡು ಪಂಥಗಳಿವೆ. ಒಂದು ಎಡಪಂಥವಾದರೆ, ಮತ್ತೊಂದು ಬಲಪಂಥ. ಮಾರ್ಕ್ಸ್‌ವಾದಿಗಳು ತಮ್ಮ ವಿಚಾರಧಾರೆಗೆ ಮೂಲವಾದ ದೇಶವನ್ನು ಪ್ರೀತಿಸುತ್ತಾರೆಯೇ ಹೊರತು ಭಾರತವನ್ನಲ್ಲ. ಬಲಪಂಥೀಯರಾದ ಸಂಘ ಪರಿವಾರದವರನ್ನೂ ರಾಷ್ಟ್ರಪ್ರೇಮಿಗಳು ಎನ್ನಲು ನಾನು ಸಿದ್ಧನಿಲ್ಲ. ಎರಡೂ ಪಂಥಗಳಿಂದ ದೂರವಿರುವ ಸ್ವತಂತ್ರ ಮನಸ್ಸಿನವರೇ ನೈಜ ರಾಷ್ಟ್ರಪ್ರೇಮಿಗಳು' ಎಂದು ವ್ಯಾಖ್ಯಾನಿಸಿದರು.
`ಕೇಸರಿ ಬಲು ಸುಂದರ ಬಣ್ಣ. ಸಂಘ ಪರಿವಾರಕ್ಕೆ ಏಕೆ ಕೇಸರಿ ಬಣ ಎನ್ನಬೇಕು ಎಂಬ ವಾದವನ್ನು ಒಮ್ಮೆ ಸ್ನೇಹಿತ ಯು.ಆರ್. ಅನಂತಮೂರ್ತಿ ಎತ್ತಿದ್ದರು. ನನಗೂ ಅದು ಹೌದೆನಿಸುತ್ತದೆ. ಸಂಘ ಪರಿವಾರಕ್ಕೆ ನಾನೆಂದೂ ಕೇಸರಿ ಬಣ ಎಂಬ ಬಣ್ಣನೆ ಮಾಡಿಲ್ಲ' ಎಂದು ನೆನೆದರು.
`ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಭಾಗಲಪುರದಲ್ಲಿ ಇಟ್ಟಿಗೆ ಪೂಜೆ ಮಾಡುವಾಗ ನಡೆದ ಹಿಂದೂ, ಮುಸ್ಲಿಂ ಗಲಭೆಯಲ್ಲಿ ಸಾವಿರಾರು ಜನ ಸತ್ತರು. ಆಗ ಮೂಲಭೂತವಾದದ ಒಂದು ಕರಾಳ ಮುಖ ಕಂಡೆ. ಛತ್ತೀಸ್‌ಗಡದ ದಾಂತೇವಾಡದಲ್ಲಿ ಮಾವೋವಾದಿಗಳು ಮತ್ತು ಸೈನಿಕರ ನಡುವಿನ ಸಂಘರ್ಷದಲ್ಲೂ ನೂರಾರು ಜನ ಸತ್ತರು. ಇಲ್ಲಿ ಮತ್ತೊಂದು ಕರಾಳ ಅಧ್ಯಾಯ ಗೋಚರಿಸಿತು. ಒಂದು ಧರ್ಮದ ಹೆಸರಿನ ಗಲಭೆಯಾದರೆ, ಇನ್ನೊಂದು ವಿಚಾರಧಾರೆಯ ಹೋರಾಟ. ಎರಡರಿಂದಲೂ ಅಪಾಯವೇ' ಎಂದು ಹೇಳಿದರು.
`ಸ್ವತಂತ್ರವಾದ ಬಹುಸಂಸ್ಕೃತಿಯಲ್ಲೇ ಭಾರತದ ಹಿತವಿದೆ' ಎಂದು ಗುಹಾ ಹೇಳಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಗಿರೀಶ ಕಾರ್ನಾಡ್ ಮತ್ತು ಸಪ್ನಾ ಬುಕ್ ಹೌಸ್‌ನ ನಿತಿನ್ ಶಾ ಹಾಜರಿದ್ದರು.
ಗುಹಾ ಉವಾಚ..
ಬೆಂಗಳೂರಿನಲ್ಲಿ ಸಿಗುವ ಅತ್ಯಂತ ಸ್ಫುರದ್ರೂಪಿ ಮನುಷ್ಯನೆಂದರೆ ಗಿರೀಶ ಕಾರ್ನಾಡ್. ಆದ್ದರಿಂದಲೇ ಪುಸ್ತಕದ ಮೊದಲ ಪ್ರತಿಯನ್ನು ಅವರಿಗೆ ಓದಲು ಕೊಟ್ಟೆ
ನಾನೊಬ್ಬ ಹಿಂದು. ಪರಿಶುದ್ಧ ಹಿಂದು. ಜಾತಿಯಿಲ್ಲದ ಸಮಾಜದ ಹಿಂದು. ದೇವಾಲಯಗಳಿಗೆ ಹೋಗದ ಹಿಂದು. ನಾನು ಉದ್ಯೋಗ ಸೇರಿದ್ದ ಸಂಸ್ಥೆಯ ಅರ್ಜಿಯಲ್ಲಿ ಧರ್ಮದ ಕಾಲಂ ಇತ್ತು. ಅದರಲ್ಲಿ ಹಿಂದು ಎಂದು ಬರೆದಿದ್ದೆ. ಮಾರ್ಕ್ಸ್‌ವಾದದ ನನ್ನ ಮಾಲೀಕ ಸಿಟ್ಟಾಗಿದ್ದರು
ಕಾಂಗ್ರೆಸ್ ಚಮಚಾಗಿರಿ ಮತ್ತು ಪಾರ್ಟಿ ಸನ್ಸ್
ರಾಜಕೀಯ ವಾತಾವರಣದ ಬಗೆಗೆ ರಾಮಚಂದ್ರ ಗುಹಾ ಮಾತನಾಡುತ್ತಾ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಅದೇ ವೇಳೆಗೆ ಚಿಂತನೆಗೂ ಹಚ್ಚಿದರು.
ನವದೆಹಲಿಯ ಜನಪಥ್ ರಸ್ತೆಯ ಅತಿಥಿ ಗೃಹದಲ್ಲಿ ಒಂದು ದಿನ ತಂಗಿದ್ದೆ. ತಾಪಮಾನ 47 ಡಿಗ್ರಿ ಸೆಲ್ಸಿಯಸ್ ಇತ್ತು. ನಂ. 10ರ ನಿವಾಸದ ಮುಂದೆ ಸಾವಿರಾರು ಜನ ನಿಂತಿದ್ದರು. ಕೈಯಲ್ಲಿ ನೂರು ಕೆಜಿ ಭಾರದ ಕೇಕ್ ಹಿಡಿದಿದ್ದರು. ಅವತ್ತು ರಾಹುಲ್ ಗಾಂಧಿ ಜನ್ಮದಿನ ಇತ್ತು. ಎಷ್ಟೇ ಕೂಗಿಕೊಂಡರೂ ಆತ ಮನೆಬಿಟ್ಟು ಆಚೆ ಬರಲಿಲ್ಲ. ಕೇಕ್ ಬಿಸಿಲಿನಲ್ಲಿ ಕರಗುತ್ತಿತ್ತು. ಕಾಂಗ್ರೆಸ್ ಚಮಚಾಗಿರಿಗೆ ಇದೊಂದು ಉದಾಹರಣೆಯಷ್ಟೇ ಎಂದು ಹೇಳುತ್ತಿದ್ದಂತೆ ನಗುವಿನ ಅಲೆ ಎದ್ದಿತು.
ಆಧ್ಯಾತ್ಮಿಕ ಭಕ್ತಿಗೆ ನನ್ನ ತಕರಾರಿಲ್ಲ. ಆದರೆ, ರಾಜಕೀಯ ಭಕ್ತಿಯ ಅಗತ್ಯವಿಲ್ಲ. ಹಾಗಾದಲ್ಲಿ ಪ್ರಜಾಪ್ರಭುತ್ವಕ್ಕೆ ಏನು ಅರ್ಥ? ಪೈಲಟ್ ಆಗಿ ನಿವೃತ್ತಿಯಾಗಬೇಕಿದ್ದ ರಾಜೀವ್, ಒಬ್ಬ ಮಹಿಳೆಯಾಗಿ ಮನೆ ಜವಾಬ್ದಾರಿ ಹೊರಲಷ್ಟೇ ಯೋಗ್ಯವಾಗಿದ್ದ ಸೋನಿಯಾ ಮತ್ತು ಕಂಪೆನಿಯೊಂದರ ವ್ಯವಸ್ಥಾಪಕ ಆಗಬಹುದಾಗಿದ್ದ ರಾಹುಲ್ ರಾಜಕೀಯಕ್ಕೆ ಬಂದಿದ್ದು ಪಾರ್ಟಿ ಸನ್ಸ್ (ನೇತಾರರ ಮಕ್ಕಳು) ಪ್ರಭಾವದಿಂದ. ಕರುಣಾನಿಧಿ, ಯಾದವ್, ಠಾಕ್ರೆ ಮೊದಲಾದ ಕುಟುಂಬಗಳಿಗೂ ಈ ಜಾಡ್ಯ ಅಂಟಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.