ADVERTISEMENT

ಕಾನೂನು ತಿದ್ದುಪಡಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2011, 19:30 IST
Last Updated 18 ನವೆಂಬರ್ 2011, 19:30 IST
ಕಾನೂನು ತಿದ್ದುಪಡಿಗೆ ಚಿಂತನೆ
ಕಾನೂನು ತಿದ್ದುಪಡಿಗೆ ಚಿಂತನೆ   

ಬೆಂಗಳೂರು: ನಾಡಿನ ರೈತರು ಬೆಳೆದ ಬೆಳೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಸ್ಪರ್ಧಾ ನೀತಿ ಜಾರಿಗಾಗಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ವೀರಪ್ಪ ಮೊಯಿಲಿ ತಿಳಿಸಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೃಷಿ ಮೇಳದ ಮೂರನೆಯ ದಿನವಾದ ಶುಕ್ರವಾರ ರೈತ ಸಾಧಕರಿಗೆ `ಡಾ.ಆರ್. ದ್ವಾರಕಿನಾಥ್ ಪ್ರಶಸ್ತಿ~ ಪ್ರದಾನ ಮಾಡಿ ಮಾತನಾಡಿದ ಅವರು, `ರೈತರ ಬೆಳೆಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆಗೂ ಸೂಕ್ತ ತಿದ್ದುಪಡಿ ತರಬೇಕಾದ ಅವಶ್ಯಕತೆ ಇದೆ~ ಎಂದು ಹೇಳಿದರು.

ದೇಶದ ಒಟ್ಟು ಕೃಷಿ ಉತ್ಪನ್ನದಲ್ಲಿ ಶೇಕಡ 6ರಷ್ಟು ಮಾತ್ರ ಪ್ರಸ್ತುತ ಸಂಸ್ಕರಣೆಗೆ ಒಳಪಡುತ್ತಿದೆ. ಇದರ ಪ್ರಮಾಣ ಇನ್ನೂ ಹೆಚ್ಚಾಗಬೇಕು. ದೇಶದ ಪ್ರತಿ ಹಳ್ಳಿಗಳಲ್ಲೂ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕ ಆರಂಭವಾಗಬೇಕು. ಆಗ ರೈತರ ಬೆಳೆಗೆ ಉತ್ತಮ ಧಾರಣೆಯೂ ಲಭ್ಯವಾಗುತ್ತದೆ ಎಂದು ವಿಶ್ಲೇಷಿಸಿದರು.

ದೇಶದಲ್ಲಿ ಅತ್ಯಂತ ಹಿಂದುಳಿದಿರುವ 300 ಜಿಲ್ಲೆಗಳನ್ನು ಪ್ರಗತಿ ಪಥದಲ್ಲಿ ಸಾಗುವಂತೆ ಮಾಡಲು ಖಾಸಗಿ ಕಂಪೆನಿಗಳ ಸಹಾಯ ಕೋರುವ ಚಿಂತನೆ ನಡೆದಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಒತ್ತಾಸೆಯ ಮೇರೆಗೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಈ ನಿಟ್ಟಿನಲ್ಲಿ ಮುಂದಡಿ ಇಟ್ಟಿದೆ ಎಂದು ಮಾಹಿತಿ ನೀಡಿದರು.

ವಿಜ್ಞಾನದ ಸಹಕಾರ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಕೃಷಿ ಕ್ಷೇತ್ರದ ವಿಜ್ಞಾನಿಗಳು ಮತ್ತು ತಂತ್ರಜ್ಞರೂ ಇದಕ್ಕೆ ಸಹಕಾರ ನೀಡಬೇಕು. ರಾಷ್ಟ್ರದ ಕೃಷಿ ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಕೇಂದ್ರಗಳಾಗಬಾರದು, ಅವರು ರೈತರಿಗೆ ಉಪಯೋಗವಾಗಬಲ್ಲ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 
`ರೈತರ ಹಿತ ಕಾಯುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿ.ವಿ. ಯಾವುದೇ ಯೋಜನೆ ರೂಪಿಸಿದರೂ ಅದಕ್ಕೆ ಕೇಂದ್ರ ಸರ್ಕಾರದ ಸಹಾಯಹಸ್ತ ದೊರಕಿಸಿಕೊಡುತ್ತೇನೆ~ ಎಂದು ಘೋಷಿಸಿದರು.

ದೇಶದ ಹೈನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ 17,370ಕೋಟಿ ರೂಪಾಯಿ ವೆಚ್ಚದ `ರಾಷ್ಟ್ರೀಯ ಹೈನುಗಾರಿಕೆ ಯೋಜನೆ~ಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಕೃಷಿ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಆರ್. ದ್ವಾರಕಿನಾಥ್ ಮಾತನಾಡಿ, `ದೇಶದ ವಿವಿಧೆಡೆ ಈಗಾಗಲೇ ಆಚರಣೆಯಲ್ಲಿರುವ ಒಣ ಬೇಸಾಯ ಪದ್ಧತಿಯನ್ನು ರಾಜ್ಯದ ರೈತರೂ ಅನುಸರಿಸಬೇಕು. ಪ್ರಸ್ತುತ ರಾಜ್ಯದ ಶೇಕಡ 60ರಷ್ಟು ಕೃಷಿ ಭೂಮಿ ಮಳೆ ನೀರನ್ನೇ ಆಶ್ರಯಿಸಿದೆ. ಒಣ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಮಳೆ ನೀರಿನ ಅವಲಂಬನೆಯನ್ನು ಕಡಿಮೆ ಮಾಡಬಹುದು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.