ADVERTISEMENT

ಕಾನೂನು ವಿದ್ಯಾರ್ಥಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST

ಬೆಂಗಳೂರು: ಕಾನೂನು ಪದವಿ ಪರೀಕ್ಷೆಯ ಮರು ಮೌಲ್ಯಮಾಪನದ ಫಲಿತಾಂಶವನ್ನು ಪೂರ್ಣವಾಗಿ ಪ್ರಕಟಿಸದ ಬೆಂಗಳೂರು ವಿಶ್ವವಿದ್ಯಾಲಯದ ನಿರ್ಲಕ್ಷ್ಯ ಧೋರಣೆ ಬಗ್ಗೆ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಕಾನೂನು ಪದವಿ ಕಾಲೇಜುಗಳ ವಿದ್ಯಾರ್ಥಿಗಳು `ಪ್ರಜಾವಾಣಿ~ಗೆ ಕರೆ ಮಾಡಿ, `ಬುಧವಾರದಿಂದ (ಮೇ 16) ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಮರು ಮೌಲ್ಯಮಾಪನದ ಫಲಿತಾಂಶ ತಿಳಿಯದೇ ನಾವು ಕತ್ತಲಿನಲ್ಲಿದ್ದೇವೆ. ಮತ್ತೆ ಪರೀಕ್ಷೆ ಬರೆಯಬೇಕೋ ಬೇಡವೋ ಎಂಬುದು ಗೊತ್ತಾಗುತ್ತಿಲ್ಲ~ ಎಂದು ಹೇಳಿದ್ದಾರೆ.

`ಪರೀಕ್ಷೆ ಫಲಿತಾಂಶ ಪ್ರಕಟಿಸುವ ಮುನ್ನವೇ ಮರು ಮೌಲ್ಯಮಾಪನ ಮತ್ತು ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಲಾಯಿತು. ಆಗಲೇ ನಾವು ಆಕ್ಷೇಪಿಸಿದರೂ ವಿ.ವಿ. ಎಚ್ಚೆತ್ತುಕೊಳ್ಳಲಿಲ್ಲ. ವಿದ್ಯಾರ್ಥಿಗಳ ಹಿತದ ಬಗ್ಗೆ ಕಿಂಚಿತ್ ಯೋಚಿಸಲಿಲ್ಲ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಗರದ ಕಾನೂನು ಪದವಿ ಕಾಲೇಜು ಪ್ರಾಂಶುಪಾಲರೊಬ್ಬರನ್ನು ಸಂಪರ್ಕಿಸಿದಾಗ, `ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ನಾವು ಉತ್ತರ ಕೊಡಲಾಗುತ್ತಿಲ್ಲ. ಇದಕ್ಕೆಲ್ಲ ವಿ.ವಿ.ಯ ಕೆಟ್ಟ ಆಡಳಿತ ವ್ಯವಸ್ಥೆಯೇ ಕಾರಣ~ ಎಂದು ದೂರಿದರು.

`ಇದುವರೆಗೆ ಶೇಕಡಾ 30ರಷ್ಟು ಮರು ಮೌಲ್ಯಮಾಪನದ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಉಳಿದ ಶೇ 70ರಷ್ಟು ಫಲಿತಾಂಶ ಪ್ರಕಟವಾಗದೇ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ~ ಎಂದು ಅವರು ಹೇಳಿದರು.

`ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟಿಸದೇ ಇರುವ ಬಗ್ಗೆ ವಿ.ವಿ. ಅಧಿಕಾರಿಗಳನ್ನು ಕೇಳಿದರೆ ಉಡಾಫೆಯ ಉತ್ತರ ಕೊಡುತ್ತಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ,  ಮರು ಮೌಲ್ಯಮಾಪನದಲ್ಲಿ ತೇರ್ಗಡೆಯಾಗಿದ್ದರೆ ಅದನ್ನೇ ಪರಿಗಣಿಸಿ ಅಂಕಪಟ್ಟಿ ನೀಡುತ್ತೇವೆ ಎಂದು ಹೇಳುತ್ತಾರೆ.
 
ವಿದ್ಯಾರ್ಥಿಗಳಿಗೆ ಆಗುತ್ತಿರುವ ಗೊಂದಲ, ಸಮಸ್ಯೆ ಪರಿಹರಿಸಲು   ವಿ.ವಿ. ಅಧಿಕಾರಿಗಳು ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ~ ಎಂದು ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.