ADVERTISEMENT

ಕಾಮಗಾರಿಯ ವೇಗಕ್ಕೆ ಮಳೆ ಲಗಾಮು

‘ನಮ್ಮ ಮೆಟ್ರೊ’ ಎರಡನೇ ಹಂತ: ಆರ್‌.ವಿ.ರಸ್ತೆ– ಬೊಮ್ಮಸಂದ್ರ ಎತ್ತರಿಸಿದ ಮಾರ್ಗ (ರೀಚ್‌–5)

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:18 IST
Last Updated 20 ಅಕ್ಟೋಬರ್ 2017, 19:18 IST
ಕಾಮಗಾರಿಯ ವೇಗಕ್ಕೆ ಮಳೆ ಲಗಾಮು
ಕಾಮಗಾರಿಯ ವೇಗಕ್ಕೆ ಮಳೆ ಲಗಾಮು   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಆರ್‌.ವಿ.ರಸ್ತೆ– ಬೊಮ್ಮಸಂದ್ರ ಎತ್ತರಿಸಿದ ಮಾರ್ಗದ (ರೀಚ್‌–5) ಕಾಮಗಾರಿ ಸತತ ಮಳೆಯ ಕಾರಣದಿಂದಾಗಿ ಕುಂಠಿತಗೊಂಡಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ರೀಚ್‌–5 ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಟೆಂಡರ್‌ ವಹಿಸಿದೆ. ಬೊಮ್ಮಸಂದ್ರ– ಹೊಸರೋಡ್‌ ನಡುವಿನ 6.4 ಕಿ.ಮೀ ಉದ್ದದ ಮಾರ್ಗದ ಕಾಮಗಾರಿಯನ್ನು ಪ್ಯಾಕೇಜ್‌–1 ಎಂದು ಗುರುತಿಸಲಾಗಿದ್ದು, ಇದಕ್ಕೆ ₹ 468 ಕೋಟಿ ವೆಚ್ಚವಾಗಲಿದೆ. ಹೊಸರೋಡ್‌ನಿಂದ ಎಚ್‌ಎಸ್‌ಆರ್ ಬಡಾವಣೆವರೆಗಿನ 6.38 ಕಿ.ಮೀ ಉದ್ದದ ಮಾರ್ಗದ ಕಾಮಗಾರಿಯನ್ನು ಪ್ಯಾಕೇಜ್‌–2 ಎಂದು ಗುರುತಿಸಿದ್ದು, ಇದಕ್ಕೆ ₹ 492 ಕೋಟಿ ವೆಚ್ಚವಾಗಲಿದೆ. 27 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿಗಮವು ಗಡುವು ವಿಧಿಸಿದೆ.

ಆರ್‌.ವಿ.ರಸ್ತೆ ನಿಲ್ದಾಣ– ಎಚ್‌ಎಸ್‌ಆರ್‌ ಬಡಾವಣೆ ನಿಲ್ದಾಣದವರೆಗಿನ  6.34 ಕಿ.ಮೀ ಉದ್ದದ ಕಾಮಗಾರಿಯನ್ನು ಪ್ಯಾಕೇಜ್‌–3 ಎಂದು ಗುರುತಿ
ಸಿದ್ದು, ಇದಕ್ಕೆ ₹ 797.29 ಕೋಟಿ ವೆಚ್ಚವಾಗಲಿದೆ. ಜಯದೇವ ಆಸ್ಪತ್ರೆ ಬಳಿ ಹಾಗೂ ಆರ್.ವಿ ರಸ್ತೆ ಬಳಿ ಇಂಟರ್‌ ಚೇಂಜ್‌ ನಿಲ್ದಾಣ ನಿರ್ಮಾಣ ಕಾಮಗಾರಿಗಳನ್ನು ಮೂರನೇ ಪ್ಯಾಕೇಜ್‌ ಒಳಗೊಂಡಿದೆ.ಕಾಮಗಾರಿಗೆ ಅಡ್ಡಿಯಾಗುವ ಕಟ್ಟಡಗಳನ್ನು ನೆಲಸಮ ಮಾಡುವ ಕೆಲಸ ಈ ವರ್ಷದ ಏಪ್ರಿಲ್‌ನಲ್ಲಿ ತಿಂಗಳಲ್ಲಿ ಆರಂಭವಾಗಿತ್ತು. ರಸ್ತೆ ವಿಸ್ತರಣೆ ಕಾರ್ಯ ಇತ್ತೀಚೆಗೆ ಆರಂಭವಾಗಿದ್ದು,ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ADVERTISEMENT

‘ಹೊಸೂರು ರಸ್ತೆಯುದ್ದಕ್ಕೂ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ನಿಲ್ದಾಣಗಳು ನಿರ್ಮಾಣವಾಗುವ ಕಡೆ ಚರಂಡಿಗಳನ್ನು ನಿರ್ಮಿಸುವ ಕಾಮಗಾರಿ ಆರಂಭಿಸಿದ್ದೆವು. ಆದರೆ, ಆಗಸ್ಟ್‌ ಬಳಿಕ ಸತತ ಮಳೆಯಾಗುತ್ತಿರುವ ಕಾರಣ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಮಳೆ ಬಿಡುವು ಕೊಟ್ಟಾಗ ಮಾತ್ರ ಕಾಮಗಾರಿ ಮುಂದುವರಿಸುತ್ತಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಕಾಮಗಾರಿ ನಡೆಸುವ ಉದ್ದೇಶ ಹೊಂದಿರುವ ನಿಗಮವು ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಹೆದ್ದಾರಿಯುದ್ದಕ್ಕೂ ಸುಮಾರು 10 ಕಿ.ಮೀ ಉದ್ದಕ್ಕೆ ಸರ್ವೀಸ್ ರಸ್ತೆ ನಿರ್ಮಿಸಬೇಕಾಗಿದೆ.

‘ರಸ್ತೆ ನಿರ್ಮಿಸುವುದು ಸವಾಲಿನ ಕೆಲಸ. ಈ ಹೆದ್ದಾರಿಯುದ್ದಕ್ಕೂ ಈಗಾಗಲೇ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪ್ರಯಾಣಿಕರಿಗೆ ಆದಷ್ಟು ಕಡಿಮೆ ಅನನುಕೂಲ ಆಗುವಂತೆ ನೋಡಿಕೊಂಡು ಸರ್ವಿಸ್‌ ರಸ್ತೆ ನಿರ್ಮಿಸಬೇಕಾಗಿದೆ. ಸಾರ್ವಜನಿಕರಿಗೆ ಹೆಚ್ಚು ಅನನುಕೂಲ ಉಂಟಾಗದ
ಸ್ಥಳಗಳನ್ನು ನೋಡಿಕೊಂಡು,ಅಂತಹ ಕಡೆಗಳಲ್ಲಿ ಕಾಮಗಾರಿ ಆರಂಭಿಸಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.