ADVERTISEMENT

ಕಾಮಗಾರಿ ವಿಳಂಬದಿಂದ ಸಂಚಾರ ತೊಡಕು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬೆಂಗಳೂರು: ಜಲಮಂಡಲಿಯ ಹೊಸ ಪೈಪ್‌ಲೈನ್‌ಗಳ ಅಳವಡಿಕೆ ಕಾಮಗಾರಿ ವಿಳಂಬದಿಂದ ನಗರದ ರಿಚ್ಮಂಡ್ ರಸ್ತೆ ಹಾಳಾಗಿದೆ. ಇದರಿಂದ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಜನರು ತೊಂದರೆ ಅನುಭವಿಸುವಂತಾಗಿದೆ.

 ಹಳೆಯದಾದ ಒಳಚರಂಡಿಯ ಪೈಪ್‌ಲೈನ್‌ಗಳನ್ನು ಬದಲಿಸುವ ಕಾರ್ಯಕ್ಕೆ ಕಳೆದ ಆರು ತಿಂಗಳ ಹಿಂದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ಮುಂದಾಗಿತ್ತು. ಆದರೆ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ರಸ್ತೆಯ ರಿಪೇರಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಬ್ರಿಟಿಷರ ಕಾಲದ ಒಳಚರಂಡಿಯ ಪೈಪ್‌ಲೈನ್‌ಗಳು ಚಿಕ್ಕವಾಗಿದ್ದು ಇದರಿಂದ ಪದೇ ಪದೇ ಪೈಪ್‌ಲೈನ್‌ಗಳು ಕೆಡುತ್ತಿದ್ದ ಕಾರಣ ರಿಚ್ಮಂಡ್ ರಸ್ತೆಯಲ್ಲಿ 800 ಮೀಟರ್ ಉದ್ದದ ಪೈಪ್‌ಲೈನ್‌ಗಳ ಬದಲಾವಣೆಗೆ ಜಲಮಂಡಲಿ ಮುಂದಾಗಿದೆ.

ರಿಚ್ಮಂಡ್ ರಸ್ತೆಯಲ್ಲಿ ಜಲಮಂಡಲಿಯು 150 ಎಂಎಂ ಪೈಪ್‌ಗಳನ್ನು ಬದಲಿಗೆ 450 ಎಂಎಂ ಪೈಪ್‌ಗಳನ್ನು ಅಳವಡಿಸುವ ಕಾರ್ಯವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದೆ.

ಜಲಮಂಡಲಿಯು ಕಾಮಗಾರಿ ಮುಗಿದ ನಂತರ ರಸ್ತೆಯ ಅಭಿವೃದ್ಧಿಯ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಹೀಗಾಗಿ ಮುಂದಿನ ವಾರದಿಂದಲೇ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಬಿಬಿಎಂಪಿ ಹೇಳಿದೆ.

44.5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯನ್ನು ಆರಂಭಿಸಲಾಗುವುದು. ಇದಕ್ಕಾಗಿ ಪಾಲಿಕೆಯ ಕಾಮಗಾರಿ ಸಮಿತಿಯ ಒಪ್ಪಿಗೆಯೂ ದೊರೆತಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಸೆಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್‌ಗಳೂ ಸೇರಿದಂತೆ ನಗರದ ಹೃದಯ ಭಾಗದ 12 ರಸ್ತೆಗಳ ನವೀಕರಣ ಕಾಮಗಾರಿಗೂ ಬಿಬಿಎಂಪಿ ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.