ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ, ರಾಜ್ಯ ಕಾರಾಗೃಹಗಳ ಇಲಾಖೆಯ ಎಡಿಜಿಪಿ ಕೆ.ವಿ.ಗಗನ್‌ದೀಪ್ ಅವರು ಶುಕ್ರವಾರ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ಗಗನ್‌ದೀಪ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ಬೆಳಿಗ್ಗೆ 12.30ರ ಸುಮಾರಿಗೆ ಕಾರಾಗೃಹಕ್ಕೆ ಭೇಟಿ ನೀಡಿತು. ಸುಮಾರು ಏಳು ತಾಸುಗಳ ಕಾಲ ತಪಾಸಣೆ ನಡೆಸಿದ ಅಧಿಕಾರಿಗಳು 15ನೇ ಬ್ಲಾಕ್‌ನಲ್ಲಿ ಕೈದಿಗಳ ಬಳಿ ಇದ್ದ ಮೊಬೈಲ್ ಮತ್ತು ಚಾರ್ಜರ್ ಪತ್ತೆ ಮಾಡಿದ್ದಾರೆ.
`ಕೊಲೆ ಪ್ರಕರಣದ ಆರೋಪಿಗಳಾದ ಸಲೀಂ ಮತ್ತು ಸುರೇಶ್ ಅವರಿದ್ದ ಕೊಠಡಿಯಲ್ಲಿ ಮೊಬೈಲ್ ಮತ್ತು ಚಾರ್ಜರ್ ಸಿಕ್ಕಿದೆ. ಆ ಇಬ್ಬರೂ ಆರೋಪಿಗಳನ್ನು ಕೂಡಲೇ ಬಳ್ಳಾರಿ ಜೈಲಿಗೆ ವರ್ಗಾಯಿಸುವಂತೆ ಸೂಚನೆ ನೀಡಲಾಗಿದೆ. ಜತೆಗೆ, ಅವರಿಗೆ ಮೊಬೈಲ್ ತಂದು ಕೊಟ್ಟವರು ಯಾರು ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ' ಎಂದು ಎಡಿಜಿಪಿ ಗಗನ್‌ದೀಪ್ ತಿಳಿಸಿದರು.
ಅಲ್ಲದೇ, ಕಾರಾಗೃಹದ ಮುಖ್ಯ ಅಧೀಕ್ಷಕ ಮತ್ತು ಸಹಾಯಕ ಅಧೀಕ್ಷಕರನ್ನು ಹೊರತುಪಡಿಸಿ ಯಾವುದೇ ಸಿಬ್ಬಂದಿ ಮುಖ್ಯ ಪ್ರವೇಶ ದ್ವಾರದಿಂದ ಕಾರಗೃಹವನ್ನು ಪ್ರವೇಶಿಸುವಂತಿಲ್ಲ. ಇತರೆ ಸಿಬ್ಬಂದಿ, ಪ್ರವೇಶದ್ವಾರ ಸಂಖ್ಯೆ 5ರಿಂದಲೇ ಒಳಗೆ ಬರಬೇಕು ಎಂದು ಆದೇಶಿಸಲಾಗಿದೆ. ಅಧಿಕಾರಿಗಳು ಇನ್ನು ಮುಂದೆ ನಿರಂತರವಾಗಿ ಕಾರಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
`ರೌಡಿಗಳು ಜೈಲಿನಲ್ಲಿದ್ದುಕೊಂಡೆ ಮೊಬೈಲ್ ಮೂಲಕ ತಮ್ಮ ಅವ್ಯವಹಾರಗಳನ್ನು ಮುಂದುವರಿಸುತ್ತಿದ್ದಾರೆ. 2005ರಲ್ಲಿ ಗುಲ್ಬರ್ಗ ಜೈಲಿನಿಂದ ನನಗೂ ಬೆದರಿಕೆ ಕರೆ ಬಂದಿತ್ತು. ಕೈದಿಗಳಿಗೆ ಮೊಬೈಲ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಪೂರೈಸುವುದಾದರೆ ಅವರನ್ನು ಬಂಧಿಸಿ ಏನು ಪ್ರಯೋಜನ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಗಗನ್‌ದೀಪ್ ಅವರನ್ನು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.