ADVERTISEMENT

ಕಾರು ರಿಪೇರಿ ಮಾಡದಿದ್ದರೆ ಭಾರಿ ದಂಡ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಬೆಂಗಳೂರು: ಕಾರು ರಿಪೇರಿಗಾಗಿ ಹಲವು ವರ್ಷಗಳಿಂದ ಅಲೆದಾಡಿದ ಗ್ರಾಹಕರೊಬ್ಬರ ನೆರವಿಗೆ ಧಾವಿಸಿರುವ ಗ್ರಾಹಕರ ವೇದಿಕೆ, 30 ದಿನಗಳ ಒಳಗೆ ಕಾರು ರಿಪೇರಿ ಮಾಡದಿದ್ದರೆ 50 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ ಎಂದು  ಎಚ್ಚರಿಕೆ ನೀಡಿದೆ.

ಹೊಂಡಾ ಕಂಪೆನಿಯ ವಿರುದ್ಧ ಶಿವಮೊಗ್ಗದ ನಿವಾಸಿ ಜಿ. ಜಿತೇಂದರ್ ಅವರು 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದಾಖಲು ಮಾಡಿರುವ ದೂರಿನ ವಿವಾದ ಇದಾಗಿದೆ.

ಇವರು ಮುಂಬೈನಲ್ಲಿರುವ ಹೊಂಡಾ ಮಳಿಗೆಯೊಂದರಲ್ಲಿ 14.25 ಲಕ್ಷ ರೂಪಾಯಿ ನೀಡಿ 2005ರಲ್ಲಿ ಕಾರು ಖರೀದಿಸಿದ್ದರು. ಖರೀದಿ ಮಾಡಿದ ಸ್ವಲ್ಪ ದಿನಗಳಲ್ಲಿಯೇ ಅದರಲ್ಲಿ ದೋಷ ಕಾಣಿಸಿಕೊಂಡಿತು. ಮುಂಬೈನಲ್ಲಿ ಅದನ್ನು ರಿಪೇರಿ ಮಾಡಿಸಿದರು.

ಆದರೂ ಕಾರನ್ನು ಸರಿಯಾಗಿ ಚಾಲನೆ ಮಾಡಲು ಜಿತೇಂದರ್ ಅವರಿಗೆ ಸಾಧ್ಯವಾಗಲಿಲ್ಲ. ಅನೇಕ ಬಾರಿ ಕಂಪೆನಿಗೆ ಅವರು ಮನವಿ ಮಾಡಿಕೊಂಡರೂ ಕಂಪೆನಿ ಅದಕ್ಕೆ ಸ್ಪಂದಿಸಲಿಲ್ಲ.
2008ರಲ್ಲಿ ಕಾರನ್ನು ಬೆಂಗಳೂರಿನಲ್ಲಿ ಇರುವ ಹೊಂಡಾ ಷೋರೂಂ ಒಂದರಲ್ಲಿ ರಿಪೇರಿಗಾಗಿ ಬಿಟ್ಟರು. ಅಲ್ಲೂ ರಿಪೇರಿಯಾಗಲಿಲ್ಲ. ಅಷ್ಟೇ ಅಲ್ಲದೇ ಕಂಪೆನಿ ಮಾಲೀಕರಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಚನೆಯೂ ದೊರಕಲಿಲ್ಲ.

ಇದರಿಂದ ಬೇಸತ್ತ ಅವರು ವೇದಿಕೆ ಮೊರೆ ಹೋದರು. ಕಂಪೆನಿ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ. ಕಾರನ್ನು 30 ದಿನಗಳ ಒಳಗೆ ರಿಪೇರಿ ಮಾಡಿಕೊಡುವಂತೆ, ಇಲ್ಲದೇ ಹೋದರೆ 50 ಸಾವಿರ ರೂಪಾಯಿಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡುವಂತೆ ವೇದಿಕೆಯ ಅಧ್ಯಕ್ಷ ಎಸ್.ಎಸ್. ನಾಗರಾಳೆ ನೇತೃತ್ವದ ಪೀಠ ಆದೇಶಿಸಿದೆ.

ರಿಪೇರಿ ಮಾಡದ ಮೊಬೈಲ್: ದಂಡ
ವಾರೆಂಟಿ ಅವಧಿಯಲ್ಲಿಯೂ ಮೊಬೈಲ್ ದೂರವಾಣಿ ಸೆಟ್ ಅನ್ನು ಉಚಿತವಾಗಿ ರಿಪೇರಿ ಮಾಡಿಕೊಡುವ ಬದಲು ಹಣ ಕೇಳಿದ `ಸಂಗೀತಾ ಮೊಬೈಲ್~ ಮಳಿಗೆಯ ಇಂದಿರಾನಗರ ಶಾಖೆಗೆ ಐದು ಸಾವಿರ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಅರ್ಜಿದಾರರಾಗಿರುವ ಎಚ್‌ಎಎಲ್ ಬಳಿಯ ನಿವಾಸಿ ಎಸ್.ಎಸ್.ಸೇತುಪತಿ ಅವರಿಗೆ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ನೀಡುವಂತೆ ಹಾಗೂ ಅವರಿಗೆ ಬದಲಿ ಮೊಬೈಲ್ ಸೆಟ್ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

ಸೇತುಪತಿ ಅವರು 2010ರ ಜನವರಿಯಲ್ಲಿ ಈ ಮಳಿಗೆಯಿಂದ 9,755 ರೂಪಾಯಿ ನೀಡಿ ಒಂದು ಸೆಟ್ ಖರೀದಿಸಿದ್ದರು. ಒಂದು ವರ್ಷದ ವಾರೆಂಟಿ ಅವಧಿ ಆ ಸೆಟ್‌ಗೆ ಇತ್ತು. ಆದರೆ ಈ ಅವಧಿಯ ಒಳಗೆಯೇ ಸೆಟ್‌ನ `ಕೀಪ್ಯಾಡ್~ ಕೆಟ್ಟಿತು.

ಅವರು ಮೊಬೈಲ್ ದೂರವಾಣಿಯ ಗ್ರಾಹಕ ಸೇವಾ ಕೇಂದ್ರಕ್ಕೆ ಹೋದಾಗ ಅಲ್ಲಿ 1,800 ರೂಪಾಯಿ ರಿಪೇರಿ ಖರ್ಚು ಕೇಳಿದರು. ವಾರೆಂಟಿ ಅವಧಿ ಇರುವ ಕಾರಣ ಉಚಿತವಾಗಿ ರಿಪೇರಿ ಮಾಡಿಕೊಡುವಂತೆ ಅರ್ಜಿದಾರರು ಮಾಡಿಕೊಂಡ ಮನವಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಅವರು ವೇದಿಕೆಯಲ್ಲಿ ದೂರು ದಾಖಲಿಸಿದ್ದರು.

ನಿವೇಶನ ನೀಡದ್ದಕ್ಕೆ ದಂಡ
ನಿವೇಶನ ನೀಡುವ ವಾಗ್ದಾನ ಮಾಡಿ ನಂತರ ವಾಗ್ದಾನ ಉಳಿಸಿಕೊಳ್ಳದ `ನ್ಯೂ ಕಂಟ್ರಿ ಪ್ರೆಸಿಡೆನ್ಸಿ ಗ್ರೂಪ್~ ಸಂಸ್ಥೆಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.
ಇದರ ವಿರುದ್ಧ ದಯಾಳ್ ದಾಸ್ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ನಡೆಸಿತು.

ರಾಮನಗರದ ಇಟ್ಟಮಡುವಿನ ಬಳಿ ನಿವೇಶನ ನೀಡುವುದಾಗಿ ತಿಳಿಸಿದ್ದ ಸಂಸ್ಥೆ 2008ರಲ್ಲಿ ಅರ್ಜಿದಾರರಿಂದ 5.28 ಲಕ್ಷ ರೂಪಾಯಿ ಪಡೆದುಕೊಂಡಿತ್ತು. ಒಂದು ತಿಂಗಳಲ್ಲಿ ನಿವೇಶನ ನೀಡುವುದಾಗಿ ಅದು ತಿಳಿಸಿತ್ತು. ಆದರೆ ಅರ್ಜಿದಾರರು ಅನೇಕ ಬಾರಿ ಮನವಿ ಮಾಡಿ ವರ್ಷ ಕಳೆದರೂ ನಿವೇಶನ ನೀಡಲಿಲ್ಲ. ಇದರಿಂದ ಅರ್ಜಿದರರು ವೇದಿಕೆ ಮೊರೆ ಹೋಗಿದ್ದರು.

ಅರ್ಜಿದಾರರು ಸಂದಾಯ ಮಾಡಿರುವ ಸಂಪೂರ್ಣ ರೂ 5.28 ಲಕ್ಷ ವನ್ನು ಅವರು ಹಣ ನೀಡಿದ ದಿನದಿಂದ ಅನ್ವಯ ಆಗುವಂತೆ ಶೇ 12ರ ಬಡ್ಡಿದರದಲ್ಲಿ ನೀಡುವಂತೆ ವೇದಿಕೆ ಆದೇಶಿಸಿದೆ. ಜೊತೆಗೆ ಅರ್ಜಿದಾರರಿಗೆ ರೂ 5,000 ಪರಿಹಾರ ನೀಡುವಂತೆಯೂ ಆದೇಶಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.