ADVERTISEMENT

ಕಾರ್ಯಕರ್ತರ ಸಂಭ್ರಮ, ಪೊಲೀಸರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 20:00 IST
Last Updated 11 ಆಗಸ್ಟ್ 2011, 20:00 IST
ಕಾರ್ಯಕರ್ತರ ಸಂಭ್ರಮ, ಪೊಲೀಸರ ಪರದಾಟ
ಕಾರ್ಯಕರ್ತರ ಸಂಭ್ರಮ, ಪೊಲೀಸರ ಪರದಾಟ   

ಬೆಂಗಳೂರು: ಡಿ.ವಿ. ಸದಾನಂದ ಗೌಡ ನೇತೃತ್ವದ ಸಚಿವ ಸಂಪುಟ ಎರಡನೇ ಬಾರಿ ವಿಸ್ತರಣೆ ಕಂಡ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿವಿಧ ಶಾಸಕರ ಬೆಂಬಲಿಗರು ರಾಜಭವನದ ಹೊರಗಡೆ ಸಂಭ್ರಮ ಆಚರಿಸಿದರು.

ಮೊದಲ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಿ.ಪಿ. ಯೋಗೀಶ್ವರ್ ಬೆಂಬಲಿಗರು ಗುರುವಾರ ರಾಜಭವನದ ಹೊರಗಡೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. `ಆಪರೇಷನ್ ಕಮಲ~ದ ಮೂಲಕ ಬಿಜೆಪಿಗೆ ಬಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರೂ ಗಮನಾರ್ಹ ಸಂಖ್ಯೆಯಲ್ಲಿ ಹಾಜರಿದ್ದರು.

ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರವೇಶ ನೀಡಲಾಗಿತ್ತು. ರಾಜಭವನದ ಹೊರಗಡೆ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರೂ ಈ ವಿಚಾರವನ್ನು ಶಾಸಕರ ಬೆಂಬಲಿಗರಿಗೆ ಬಾರಿ ಬಾರಿ ಸ್ಪಷ್ಟಪಡಿಸುತ್ತಿದ್ದರು.

ಪೊಲೀಸರು ಮಾಡಿಕೊಳ್ಳುತ್ತಿದ್ದ ಮನವಿಯನ್ನೂ ಲೆಕ್ಕಿಸದೆ ಅನೇಕರು ಮತ್ತೆ ಮತ್ತೆ ರಾಜಭವನದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು. ರಾಜಭವನಕ್ಕೆ ಬರುವವರನ್ನು ತಪಾಸಣೆಗೆ ಒಳಪಡಿಸಲು ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಉಪಸ್ಥಿತರಿದ್ದರೂ, ಪಾಸ್ ಇಲ್ಲದೆ ಪ್ರವೇಶ ಗಿಟ್ಟಿಸಲು ಹಾತೊರೆಯುತ್ತಿದ್ದ ಶಾಸಕರ ಕೆಲವು ಬೆಂಬಲಿಗರನ್ನು ನಿಯಂತ್ರಿಸಲು ಅವರು ಹರಸಾಹಸ ಪಡಬೇಕಾಯಿತು.

ಸಂಚಾರ ದಟ್ಟಣೆ: ಬೇರೆ ಬೇರೆ ವಿಧಾನ ಸಭಾ ಕ್ಷೇತ್ರಗಳಿಂದ ಬೆಂಗಳೂರಿಗೆ ಬಂದಿದ್ದ ಶಾಸಕರ ಬೆಂಬಲಿಗರು ರಾಜಭವನ ರಸ್ತೆಯ ಪಕ್ಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಅಲ್ಲದೆ, ರಾಜಭವನದ ಒಳಗೆ ಪ್ರವೇಶ ದೊರೆಯದವರು ಹೊರಗಡೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದ ಕೆಲವು ಸಮಯ ರಾಜಭವನ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಕಂಡುಬಂದಿದ್ದ ಪಟಾಕಿ, ವೀರಗಾಸೆ ನೃತ್ಯಗಳು ಗುರುವಾರ ಇರಲಿಲ್ಲ. ಆದರೆ, ವರ್ತೂರು ಪ್ರಕಾಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ರಾಜಭವನದಿಂದ ಹೊರಬರುತ್ತಿದ್ದಂತೆಯೇ ಬೆಂಬಲಿಗರು ಅವರನ್ನು ಕೆಲ ಕಾಲ ಹೊತ್ತು ಕುಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.