ADVERTISEMENT

ಕಾಲುವೆ ಅಗಲ: ಅಧಿಕಾರಿಗಳಲ್ಲೇ ಗೊಂದಲ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ಕಾಲುವೆ ಅಗಲ: ಅಧಿಕಾರಿಗಳಲ್ಲೇ ಗೊಂದಲ
ಕಾಲುವೆ ಅಗಲ: ಅಧಿಕಾರಿಗಳಲ್ಲೇ ಗೊಂದಲ   

ಬೆಂಗಳೂರು: ರಾಜಕಾಲುವೆ ಹಾಗೂ ಉಪಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ಸೋಮವಾರವೂ ಮುಂದುವರೆದಿತ್ತು.
ಕಾರ್ಯಾಚರಣೆಯ ವೇಳೆ ಮನೆಗಳ ಮಾಲೀಕರು ಮತ್ತೆ–ಮತ್ತೆ  ಬಿಬಿಎಂಪಿ ಅಧಿಕಾರಿಗಳೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 
ಆದರೆ, ಯಾವುದಕ್ಕೂ ಜಗ್ಗದ ಅಧಿಕಾರಿಗಳು, ಪೊಲೀಸರ ಬಿಗಿಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿದರು.

ನಗರದ ರಾಮಚಂದ್ರಪುರದಲ್ಲಿ ಮನೆ ಮಾಲೀಕ ಶಶಿಕುಮಾರ್ ಎಂಬುವರು ‘ರಾಜಕಾರಣಿಗಳ ಪ್ರಭಾವ’ ಬಳಸುವುದಾಗಿ ಅಧಿಕಾರಿಗಳಿಗೆ ಆವಾಜ್‌ ಹಾಕಿದರು.

ಇದರಿಂದ ಕೆರಳಿದ ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್‌, ‘ಗದ್ದಲ ಸೃಷ್ಟಿಸಿ ಸರ್ಕಾರಿ ಕೆಲಸಕ್ಕೆ ಅಡಚಣೆ ಉಂಟು ಮಾಡಿದರೆ ಬಂಧಿಸಿ ಜೈಲಿಗೆ ಹಾಕುವ ಅಧಿಕಾರ ಇದೆ’ ಎಂದು ಎಚ್ಚರಿಸಿದರು.
ಮತ್ತೊಂದೆಡೆ, ಮಹದೇವಪುರ ವಲಯದ ಕಸವನಹಳ್ಳಿಯಲ್ಲಿ ಉಪ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆಯೂ ಮನೆ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಲು ಯತ್ನಿಸಿದವರ ಮೇಲೆ ಸ್ಥಳದಲ್ಲಿದ್ದ ಪೊಲೀಸರು ಲಾಠಿ ಬೀಸಿದರು. ಬಳಿಕ ಬೃಹತ್‌ ಯಂತ್ರಗಳು ಕಾರ್ಯಾಚರಣೆ ಮುಂದುವರೆಸಿದವು.

ಅಧಿಕಾರಿಗಳಿಗೇ ಗೊಂದಲ?: ಕಸವನಹಳ್ಳಿಯ ಶುಭ್‌ ಎನ್‌ಕ್ಲೇವ್‌ನಲ್ಲಿ ರಾಜಕಾಲುವೆಯನ್ನು ಸಂಪರ್ಕಿಸುವ ಉಪ ಕಾಲುವೆಗಳ ಅಗಲ  ಭಾನುವಾರ ಸಂಜೆ ತನಕ 5 ಮೀಟರ್‌ ಇತ್ತು. ಆದರೆ, ಸೋಮವಾರ ಅದು 7.4 ಮೀಟರ್‌ಗಳಿಗೆ ಹೆಚ್ಚಿತ್ತು!
ಉಪಕಾಲುವೆ ಅಗಲವನ್ನು 2.4 ಮೀಟರ್‌ ಹೆಚ್ಚಿಸಿದ ಬಿಬಿಎಂಪಿ ಅಧಿಕಾರಿಗಳ ಕ್ರಮ, ಬಂಗಲೆಗಳ ಮಾಲೀಕರು ಹಾಗೂ ಶುಭ್‌ ಎನ್‌ಕ್ಲೇವ್‌ ಸೈಟ್‌ ಓನರ್ಸ್‌ ಅಸೋಸಿಯೇಷನ್‌ನ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

‘ಯಾವುದೇ ಒಂದು ನಕ್ಷೆಗೆ ಯಾಕೆ  ಬದ್ಧರಾಗುತ್ತಿಲ್ಲ? ನೀವು ಅನುಸರಿಸುತ್ತಿರುವ ನಕ್ಷೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ವೈಬ್‌ಸೈಟ್‌ನಲ್ಲಿ ಯಾಕೆ ಹಾಕುತ್ತಿಲ್ಲ. ನೀವು  ಪ್ರಭಾವಿಗಳ ಪರಕಾಲುವೆ ಪಥವನ್ನು ಬದಲಿಸುತ್ತಿದ್ದೀರಿ’ ಎಂದು ಸ್ಥಳೀಯರು ಆರೋಪಿಸಿದರು.
‘ಮುಂದಿನ ಬಾರಿ ಯಾರ ಕಟ್ಟಡ ಹೋಗುತ್ತದೆ ಎಂಬ ಭೀತಿ ಕಾಡುತ್ತಿದೆ. ಬೆವರು ಸುರಿಸಿ ಗಳಿಸಿದ ಹಣದಿಂದ ಕಟ್ಟಿರುವ ಮನೆಗಳನ್ನು ಯಾವುದೇ ಮುನ್ಸೂಚನೆ ಕೊಡದೆ ಅಧಿಕಾರಿಗಳು ನೆಲಸಮ ಮಾಡಿದರೆ ಏನು ಗತಿ? ಕಾರ್ಯಾಚರಣೆಗೆ ಬಳಸುತ್ತಿರುವ ನಕ್ಷೆ ನೋಡುವ ಅಧಿಕಾರ ನಮಗಿದೆ’ ಎನ್ನುತ್ತಾರೆ  ಸ್ಥಳೀಯ ನಿವಾಸಿ ವನಿತಾ.
ಆದರೆ, ಸ್ಥಳೀಯರ ಪ್ರಶ್ನೆಗಳಿಗೆ ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ. ‘ಸೋಮವಾರ ಹೆಚ್ಚುವರಿಯಾಗಿ ಗುರುತು ಹಾಕಿದ 2.4 ಮೀಟರ್ ಜಾಗದ ಕುರಿತು ಗೊಂದಲ ಸೃಷ್ಟಿಯಾಗಿದೆ. ತಹಸೀಲ್ದಾರ್ ಜತೆ ಚರ್ಚಿಸಿ  ಮುಂದಿನ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ಅಧಿಕಾರಿಗಳ ವ್ಯತಿರಿಕ್ತ  ಕ್ರಮ

‘ಶನಿವಾರ ನಮ್ಮ ಕಾಂಪೌಂಡ್‌ ಗೋಡೆಯಿಂದ ಆಚೆಗೆ 5 ಮೀಟರ್ ಗುರುತು ಹಾಕಿದ್ದರು.  ‘ಸರ್ವೇ ನಂಬರ್ 57 ಮಾತ್ರ ಬರುತ್ತೆ. ನಿಮ್ಮ ಜಾಗ ಬರಲ್ಲ.  ಅದಕ್ಕೆ ಖುಷಿ ಪಡ್ರಿ... ಪಾರ್ಟಿ ಏನಾದರೂ ಕೊಡ್ತೀರಾ? ಎಂದು ಅಧಿಕಾರಿಗಳು  ಚಟಾಕಿ ಹಾರಿಸಿದ್ದರು. ಆದರೆ, ಇಂದು ಅದೇ ಅಧಿಕಾರಿಗಳು ನಿಮ್ಮ ಜಾಗವೂ ಬರುತ್ತದೆ ಎನ್ನುತ್ತಿದ್ದಾರೆ’ ಎಂದು ಮನೆ ಮಾಲೀಕ ರವಿಚಂದ್ರ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಕುರಿತು ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಹೌದು ನಿಮ್ಮ ಜಾಗದಲ್ಲೂ 2.4 ಮೀಟರ್‌ ಬರುತ್ತದೆ. ನಿಮ್ಮದು ಖರಾಬ್‌ ಉತ್ತರ್ ಜಾಗ ಎನ್ನುತ್ತಿದ್ದಾರೆ. ಹಾಗೆ ಅಂದರೇನು  ಎಂದೇ ತಿಳಿಯುತ್ತಿಲ್ಲ.
ಗ್ರಾಮದ ಹಳೆಯ ನಕ್ಷೆಯಲ್ಲಿ ಅದು ಇಲ್ಲವೇ ಇಲ್ಲ’ ಎಂದು ನಕ್ಷೆ ತೋರಿಸಲು ಮುಂದಾದರು.
‘ಕೇವಲ ಗುರುತು ಮಾತ್ರ ಮಾಡಿದ್ದಾರೆ. ಅಲ್ಲಿ ನಮ್ಮ ಕಾಂಪೌಂಡ್‌ ಹಾಗೂ ಖಾಲಿ ಜಾಗವಷ್ಟೇ ಇದೆ. ಇನ್ನೊಂದು ಸರಿಯಾಗಿ ಪರಿಶೀಲನೆ ನಡೆಸಿದ ಬಳಿಕವಷ್ಟೇ ಕಾರ್ಯಾಚರಣೆ ನಡೆಸುವುದಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದರು.

ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ರಾಜಕಾಲುವೆಗಳ ಮೀಸಲು ಪ್ರದೇಶಗಳಲ್ಲಿ ಕಟ್ಟಡಗಳ ನಿರ್ಮಾಣ ಮಾಡಲು ಬಿಲ್ಡರ್‌ಗಳಿಗೆ ಅವಕಾಶ ಕಲ್ಪಿಸಿದ ಅಧಿಕಾರಿಗಳನ್ನು ಶಿಕ್ಷಿಸಬೇಕು’ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಆಗ್ರಹಿಸಿದ್ದಾರೆ.
‘ಬಿಲ್ಡರ್‌ಗಳಿಂದ ಮನೆ ಖರೀದಿ ಮಾಡಿದವರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ. ತಪ್ಪೆಸಗಿದ ಬಿಲ್ಡರ್‌ಗಳು ಹಾಗೂ ಅಧಿಕಾರಿಗಳು ನೆಮ್ಮದಿಯಿಂದ ಇದ್ದಾರೆ. ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ  ಕೈಗೊಳ್ಳಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆ. ಆದರೆ, ಈವರೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಅಕ್ರಮದಲ್ಲಿ ಸರ್ಕಾರವೂ ಭಾಗಿಯಾಗಿದೆ ಎಂಬ ಅನುಮಾನ ಮೂಡುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.