ADVERTISEMENT

ಕಾಲ ಬದಲಾದರೂ ರಾಜಕೀಯ ಬದಲಾಗದು

`ನಾಲ್ಕನೇ ಆಯಾಮ' ಸಂಪುಟ ಬಿಡುಗಡೆ: ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 20:18 IST
Last Updated 13 ಜುಲೈ 2013, 20:18 IST

ಬೆಂಗಳೂರು: ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ. ಪಾತ್ರಗಳು ಬದಲಾಗುತ್ತವೆ. ಆದರೆ, ರಾಜಕೀಯ ಹಾಗೆಯೇ ಇರುತ್ತದೆ ಎಂದು ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟರು.

ವಸಂತ ಪ್ರಕಾಶನ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ `ನಾಲ್ಕನೇ ಆಯಾಮ' ಅಂಕಣ ಬರಹಗಳ ಐದು ಮತ್ತು ಆರನೇ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನ ಸರ್ಕಾರದಲ್ಲಿ ನಡೆದ ಘಟನೆಗಳು ಈಗಿನ ಸರ್ಕಾರದಲ್ಲಿ ನಡೆಯುವುದಿಲ್ಲ ಎಂದು ಭಾವಿಸಲು ಆಗದು ಎಂದು ಹೇಳಿದರು.

ರಾಜಕೀಯ ಸಂಪುಟದ ಪ್ರಸ್ತುತತೆ ಕುರಿತು ಮಾತನಾಡಿದ ಅವರು `ವಿಶ್ವೇಶ್ವರಯ್ಯನವರು 1909ರಲ್ಲಿ ಕನ್ನಂಬಾಡಿ ಕಟ್ಟುವಾಗ ಎದ್ದ ಹಣಕಾಸಿನ ಪ್ರಶ್ನೆ, 1985ರಲ್ಲಿ ಎಚ್.ಡಿ ದೇವೇಗೌಡರು ಕಾವೇರಿ-ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಮುಂದಾದಾಗಲೂ ಎದ್ದಿತ್ತು, ಎರಡೂ ಸಂದರ್ಭದಲ್ಲಿ ಹಣಕಾಸು ಇಲಾಖೆ ಹಣ ನೀಡಲು ತಕರಾರು ಎತ್ತಿತ್ತು; ಈಗ 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹಣ ಬಿಡುವ ಗಿಡ ಇಲ್ಲ, ಎಚ್ಚರಿಕೆಯಿಂದ ಖರ್ಚು ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ವ್ಯಕ್ತಿಗಳು ಬದಲಾದರೂ ಮನಸ್ಥಿತಿ ಒಂದೇ ಆಗಿರುತ್ತದೆ' ಎಂದು ಅವರು ನೆನಪಿಸಿದರು.

ಕೃತಿ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್, `ಆದರ್ಶ ಸಮಾಜ ಮತ್ತು ಮಾದರಿ ವ್ಯಕ್ತಿ ಹೇಗಿರಬೇಕು ಎನ್ನುವುದೇ ಈ ಸಂಪುಟಗಳ ಆಶಯವಾಗಿದೆ. ಬದುಕಿನ ಅನುಭವವನ್ನೇ ಬರಹ ರೂಪಕ್ಕೆ ಇಲ್ಲಿ ಇಳಿಸಲಾಗಿದ್ದು ಸಮಾಜದ ಮನಸ್ಸಾಕ್ಷಿಯನ್ನು ಓದುಗರ ಮುಂದೆ ಮಂಡಿಸಲಾಗಿದೆ' ಎಂದು ಹೇಳಿದರು.

ಅಂಕಣದ ಸಾಂಸ್ಕೃತಿಕ ಬರಹಗಳ ಸಂಪುಟ ಕುರಿತು ಮಾತನಾಡಿದ ಕಥೆಗಾರ ವಿವೇಕ ಶಾನಭಾಗ್, `ಪತ್ರಕರ್ತರಿಗೆ ವೃತ್ತಿ ಕೌಶಲ ಮಾತ್ರ ಗೊತ್ತಿರುತ್ತದೆ. ಅದರ ಆಧಾರದ ಮೇಲೆ ಪ್ರತಿಯೊಂದನ್ನು ಗ್ರಹಿಸಿ ಬರೆಯುತ್ತಾರೆ. ಆದರೆ, `ನಾಲ್ಕನೇ ಆಯಾಮ'ದ ಬರಹಗಳಲ್ಲಿ ಆಳವಾದ ಜೀವನ ಪ್ರೀತಿ ಇದೆ. ವಸ್ತು ವಿಸ್ತಾರ ದೊಡ್ಡದಿದೆ' ಎಂದು ಅಭಿಪ್ರಾಯಪಟ್ಟರು.

`ಸಾಂಸ್ಕೃತಿಕ ಜಗತ್ತಿನಲ್ಲಿ `ಪ್ರಜಾವಾಣಿ'ಗೆ ತನ್ನದೇ ಆದ ಬಲು ಮಹತ್ವದ ಸ್ಥಾನ ಇದೆ. ನಾಡಿನ ಸಾಂಸ್ಕೃತಿಕ ರಂಗದ ಬೆಳವಣಿಗೆಯಲ್ಲಿ ಪೋಷಕನಾಗಿ ನಿಂತಿದೆ ಪತ್ರಿಕೆ. ಅದರ ಅಸ್ಮಿತೆಯನ್ನು ಸರಿಯಾಗಿ ಗ್ರಹಿಸಿರುವ ಇಲ್ಲಿನ ಬರವಣಿಗೆ ಕೂಡ ಅಷ್ಟೇ ಎತ್ತರದಲ್ಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. `ದೈನಂದಿನ ಮತ್ತು ನಿರಂತರ ಗುಣಗಳೆರಡೂ ಮೇಳೈಸಿರುವ ಅಂಕಣದಲ್ಲಿ ಯಾವುದನ್ನೂ ಹೇಳಲು ಹಿಂಜರಿಯದ ಧೈರ್ಯ ಇದೆ. ಆತ್ಮ ನಿರೀಕ್ಷೆಯೂ ಇದೆ' ಎಂದರು.

`ರಾಜಕಾರಣಿಗಳು ವೈಯಕ್ತಿಕವಾಗಿ ಹಾಳಾದರೆ ಚಿಂತೆ ಇಲ್ಲ; ಆದರೆ ಅವರು ನಾಡನ್ನು ಹಾಳು ಮಾಡುವುದು ಬೇಡ ಎನ್ನುವುದಷ್ಟೇ ನನ್ನ ಬರಹದ ಉದ್ದೇಶ. ಜನರ ಭಾವನೆಗಳಿಗೆ ನಾನು ಧ್ವನಿಯಾಗಲು ಪ್ರಯತ್ನಿಸಿದ್ದೇನೆ ಅಷ್ಟೇ' ಎಂದು ಲೇಖಕ ಪದ್ಮರಾಜ ದಂಡಾವತಿ ಹೇಳಿದರು. ಡಿ.ವಿ.ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.