ADVERTISEMENT

ಕಿಡ್ನಿ ಖರೀದಿ ನೆಪದಲ್ಲಿ ಮೋಸ

ಎನ್‌.ಯು ಆಸ್ಪತ್ರೆ ಆಡಳಿತಾಧಿಕಾರಿ ದೂರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 19:51 IST
Last Updated 7 ಡಿಸೆಂಬರ್ 2017, 19:51 IST

ಬೆಂಗಳೂರು: ತನ್ನನ್ನು ಪದ್ಮನಾಭನಗರದ ‘ಎನ್‌.ಯು’ ಆಸ್ಪತ್ರೆ ವೈದ್ಯನೆಂದು ಪರಿಚಯಿಸಿಕೊಂಡ ದುಷ್ಕರ್ಮಿಯೊಬ್ಬ, ಕಿಡ್ನಿ ಮಾರಾಟ ಮಾಡಿದರೆ ₹ 88 ಲಕ್ಷ ನೀಡುವುದಾಗಿ ಮಹಿಳೆಯೊಬ್ಬರಿಗೆ ನಂಬಿಸಿ ನೋಂದಣಿ ಶುಲ್ಕದ ರೂಪದಲ್ಲಿ ₹ 1.37 ಲಕ್ಷ ದೋಚಿದ್ದಾನೆ.

ಈ ಸಂಬಂಧ ಆಸ್ಪತ್ರೆಯ ಆಡಳಿತಾಧಿಕಾರಿ ಆಸ್ಮಾಭಾನು ಅವರು ನ.29ರಂದು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ. ವಂಚನೆ (ಐಪಿಸಿ 419, 420) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗೆ ಸೈಬರ್ ಕ್ರೈಂ ಅಧಿಕಾರಿಗಳ ನೆರವು ಕೋರಿದ್ದಾರೆ.

ಫೇಸ್‌ಬುಕ್ ಪ‍ರಿಚಯ: ಡಾ.ಸೈಯದ್ ಮಹಮದ್ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದಿದ್ದ ಆರೋಪಿ, ಪದ್ಮನಾಭನಗರದ ವನಜಾ ಎಂಬುವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಆ ಸ್ನೇಹದ ಕೋರಿಕೆಯನ್ನು ಒಪ್ಪಿಕೊಂಡ ಅವರು, ವೈದ್ಯನೆಂದು ಭಾವಿಸಿ ಆತನೊಂದಿಗೆ ಸಂದೇಶ ವಿನಿಮಯ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ನಾನು ಎನ್‌.ಯು ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ವಿಭಾಗದ ಸರ್ಜನ್ ಆಗಿದ್ದೇನೆ. ನಮಗೆ ಕಿಡ್ನಿ ಮಾರಾಟ ಮಾಡಿದವರಿಗೆ ₹ 88 ಲಕ್ಷ ಕೊಡುತ್ತೇವೆ’ ಎಂದು ಹೇಳಿದ್ದ. ಹಣದ ಆಸೆಗೆ ಬಿದ್ದ ವನಜಾ, ಕಿಡ್ನಿ ಮಾರಲು ಒಪ್ಪಿಕೊಂಡಿದ್ದರು. ಆಗ ಆರೋಪಿ, ‘ಮೊದಲು ₹ 1.37 ಲಕ್ಷ ಕಟ್ಟಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಹೇಳಿದ್ದ. ಅಂತೆಯೇ ಅವರು ಆತ ಕೊಟ್ಟಿದ್ದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದರು.

ಹಣ ಕೈಸೇರಿದ ಬಳಿಕ ವನಜಾ ಅವರನ್ನು ಸಂಪರ್ಕಿಸಿದ್ದ ಆರೋಪಿ, ಆಸ್ಪತ್ರೆಗೆ ಬಂದು ತನ್ನನ್ನು ಭೇಟಿಯಾಗುವಂತೆ ಹೇಳಿದ್ದಾನೆ. ಅಂತೆಯೇ ಅವರು ಪತಿ ಜತೆ ಎನ್‌.ಯು ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ. ಆಗ, ‘ಸೈಯದ್ ಮಹಮದ್ ಹೆಸರಿನ ಯಾವ ವೈದ್ಯರೂ ನಮ್ಮಲ್ಲಿ ಇಲ್ಲ’ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಇದರಿಂದ ಆಘಾತಕ್ಕೊಳಗಾದ ದಂಪತಿ, ನಡೆದ ಘಟನೆಯನ್ನು ಆಡಳಿತಾಧಿಕಾರಿ ಆಸ್ಮಭಾನು ಅವರಿಗೆ ತಿಳಿಸಿದ್ದಾರೆ. ಆಸ್ಪ‍ತ್ರೆ ಹೆಸರನ್ನು ದುರ್ಬಳಕೆ ಮಾಡಿಕೊಂಡ ಹಾಗೂ ವನಜಾ ಅವರಿಗೆ ₹ 1.37 ಲಕ್ಷ ವಂಚಿಸಿರುವ ಆರೋಪಿಯನ್ನು ಪತ್ತೆ ಮಾಡುವಂತೆ ಕೋರಿ ಅವರೇ ಠಾಣೆಗೆ ದೂರು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.