ADVERTISEMENT

ಕಿರುಕುಳ: ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ!

ಪತ್ನಿ, ಅತ್ತೆ, ಸೋದರ ಮಾವನ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:53 IST
Last Updated 29 ಮಾರ್ಚ್ 2018, 19:53 IST
ಸಂತೋಷ್
ಸಂತೋಷ್   

ಬೆಂಗಳೂರು:‌ ‘ಪತಿ, ಆಕೆಯ ತಾಯಿ ಹಾಗೂ ಸೋದರ ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸೆಲ್ಫಿ ವಿಡಿಯೊ ಮಾಡಿಟ್ಟು ಪೇಯಿಂಗ್ ಗೆಸ್ಟ್ ಕಟ್ಟಡವೊಂದರ ಮೇಲ್ವಿಚಾರಕ ಸಂತೋಷ್ (30) ಬುಧವಾರ ಸಂಜೆ ನೇಣು ಹಾಕಿಕೊಂಡಿದ್ದಾರೆ.

ಚಿತ್ತೂರಿನವರಾದ ಸಂತೋಷ್, ಬಸವೇಶ್ವರನಗರ ಸಮೀಪದ ಕುರುಬರಹಳ್ಳಿಯಲ್ಲಿರುವ ‘ಲಕ್ಷ್ಮಿ’ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಸ್ವಚ್ಛತಾ ಕೆಲಸಗಾರರೊಬ್ಬರು ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸೆಲ್ಫಿ ವಿಡಿಯೊ, ಮರಣಪತ್ರ ಆಧರಿಸಿ ಪತ್ನಿ ಗಾಯತ್ರಿ, ಅತ್ತೆ ಭಾಗ್ಯಮ್ಮ ಹಾಗೂ ಸೋದರಮಾವ ಸೋಮಶೇಖರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 304ಎ) ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಪೀಣ್ಯದ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಸಂತೋಷ್, ಒಳ್ಳೆಯ ಕೆಲಸಗಾರ ಎಂಬ ಕಾರಣಕ್ಕೆ ಆ ಕಾರ್ಖಾನೆ ಮಾಲೀಕರು, ತಮ್ಮ ಪೇಯಿಂಗ್ ಗೆಸ್ಟ್ ಕಟ್ಟಡದ ವ್ಯವಹಾರವನ್ನೂ ನೋಡಿಕೊಳ್ಳಲು ಸೂಚಿಸಿದ್ದರು.

ಎಂಜಿನಿಯರಿಂಗ್ ಪದವೀಧರೆಯಾದ ಮತ್ತೀಕೆರೆಯ ಗಾಯತ್ರಿ ಜತೆ 4 ವರ್ಷಗಳ ಹಿಂದೆ ಅವರ ವಿವಾಹವಾಯಿತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ, ಆರೇ ತಿಂಗಳಲ್ಲಿ ಮನಸ್ತಾಪ ಶುರುವಾಗಿ, ಗಾಯತ್ರಿ ತವರು ಮನೆ ಸೇರಿದರು. ಪತ್ನಿಯ ಮನ
ವೊಲಿಕೆಗೆ ಸಂತೋಷ್ ಹಲವು ಬಾರಿ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಎರಡೂ ಕುಟುಂಬಗಳ ಹಿರಿಯರು ನಡೆಸಿದ ರಾಜಿ–ಸಂಧಾನಗಳಿಂದಲೂ ದಾಂಪತ್ಯ ಸರಿ ಹೋಗಿರಲಿಲ್ಲ.

ಈ ನಡುವೆ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಮಹಾಲಕ್ಷ್ಮಿಲೇಔಟ್ ಠಾಣೆಗೆ ದೂರು ಕೊಟ್ಟಿದ್ದ ಗಾಯತ್ರಿ, ವಿಚ್ಛೇದನ ಕೋರಿ ನ್ಯಾಯಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಈ ಬೆಳವಣಿಗೆಗಳಿಂದ ಸಂತೋಷ್ ಖಿನ್ನತೆಗೆ ಒಳಗಾಗಿದ್ದರು ಎಂಬುದು ಕುಟುಂಬ ಸದಸ್ಯರ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.