ADVERTISEMENT

ಕುಂಬಾರಹಳ್ಳಿ ಕೆರೆ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ‘ನಮ್ಮೂರು ನಮ್ಮ ಕೆರೆ ಪುನಶ್ಚೇತನ’ ಕಾರ್ಯಕ್ರಮದಡಿ ಹೆಸರಘಟ್ಟ ಹೋಬಳಿಯ ಕುಂಬಾರಹಳ್ಳಿ ಕೆರೆಯ ಪುನಶ್ಚೇತನ ಕಾಮಗಾರಿ ಗುರುವಾರ ನಡೆಯಿತು.

‘ಕುಂಬಾರಹಳ್ಳಿ ಕೆರೆಯ ಸುತ್ತಲೂ  ಕಟ್ಟಡ ತ್ಯಾಜ್ಯ, ಹಸಿ ತ್ಯಾಜ್ಯ ಸುರಿಯಲಾಗಿದ್ದು, ಸಂಪೂರ್ಣ ಕಲುಷಿತಗೊಂಡಿದೆ. ಅದನ್ನು ಸ್ವಚ್ಚಗೊಳಿಸುವ ಜೊತೆಗೆ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಲಾಗುವುದು. ಕೆರೆಯ ಬದಿಯಲ್ಲಿ ಇರುವ ಹೊಂಗೆ ಮರಗಳನ್ನು ಪೋಷಿಸಲು ಅಗತ್ಯ ಸೌಲಭ್ಯ ರೂಪಿಸಲಾಗುವುದು. ಮಾತ್ರವಲ್ಲ ಕೆರೆಯ ಸುತ್ತಲೂ ಇನ್ನೂ ಹೆಚ್ಚಿನ ಮರಗಳನ್ನು ಬೆಳೆಸಲಾಗುವುದು’ ಎಂದು ಯೋಜನೆಯ ನಿರ್ದೇಶಕ ವಸಂತ್ ಸಾಲಿಯಾನ ತಿಳಿಸಿದರು.

‘ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ನೂರು ಕೆರೆಗಳನ್ನು ಪುನಶ್ಚೇತಗೊಳಿಸಲಾಗುವುದು. ₹10 ಲಕ್ಷ ವೆಚ್ಚದಲ್ಲಿ ಪ್ರತಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುವುದು. ವಿರೇಂದ್ರ ಹೆಗ್ಗಡೆ ಅವರು ಕೆರೆಗಳ ಬಗ್ಗೆ ತೀವ್ರ ಕಾಳಜಿಯನ್ನು ಹೊಂದಿದ್ದು, ಅವುಗಳನ್ನು ಪುನಶ್ಚೇತನಗೊಳಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಆಶಯವಾಗಿದೆ’ ಎಂದು ಜನ ಜಾಗೃತಿ ಸಂಸ್ಥೆಯ ಅಧ್ಯಕ್ಷ ರಾಮಸ್ವಾಮಿ ಹೇಳಿದರು.

ADVERTISEMENT

‘ಕುಂಬಾರಹಳ್ಳಿಯ ಸುತ್ತ ಮುತ್ತ ರಾಗಿ, ಟೊಮೆಟೊ, ಹಲಸಂದೆ ಬೆಳೆಯಲಾಗುತ್ತದೆ. ಕೆರೆಯಲ್ಲಿ ನೀರು ಸಂಗ್ರಹಗೊಂಡರೆ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತದೆ. ಕೆರೆ ಪುನಶ್ಚೇತನ ಮಾಡುತ್ತಿರುವುದು ನಿಜಕ್ಕೂ ನಮಗೆ ವರದಾನವಾಗಿದೆ’ ಎಂದು ರೈತ ಹನುಮಣ್ಣ ಹರ್ಷ ವ್ಯಕ್ತಪಡಿಸಿದರು.

‘ಹತ್ತು ವರ್ಷಗಳಿಂದ ಕೆರೆ ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಈ ಯೋಜನೆಯ ಮೂಲಕ ನಮ್ಮೂರಿನ ಕೆರೆಯನ್ನು ಉಪಯುಕ್ತ ಕೆರೆಯನ್ನಾಗಿ ಮಾಡಬಹುದು’ ಎಂದು ಕೆರೆ ಪುನಶ್ಚೇತನ ಸಮಿತಿ ಅಧ್ಯಕ್ಷ ಬೈಲಪ್ಪ ಹೇಳಿದರು.
*
ಅಂಕಿ-ಅಂಶ

31 ಹೆಕ್ಟೇರ್‌
ಕೆರೆ ಪ್ರದೇಶ

₹10 ಲಕ್ಷ
ಪುನಶ್ಚೇತನ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.