ADVERTISEMENT

ಕುಡಿದು ವಾಹನ ಚಾಲನೆ ಸಿಕ್ಕಿಬೀಳುವವರು ಕಡಿಮೆ!

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ನಗರದಲ್ಲಿ ಕುಡಿದು ವಾಹನ ಚಲಾಯಿಸಿ, ಅಪಘಾತಕ್ಕೆ ಒಳಗಾಗಿ ಮೃತಪಟ್ಟವರ ಸಂಖ್ಯೆ 2010ರ ನಂತರ ಹೆಚ್ಚಾಗುತ್ತಿದೆ. ಆದರೆ ಕುಡಿದು ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿರುವ ಭೂಪರ ಸಂಖ್ಯೆ 2010ರ ನಂತರ ಕಡಿಮೆಯಾಗಿದೆ!

ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಅವರು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಸಲ್ಲಿಸಿರುವ ಹೇಳಿಕೆಯೊಂದರಲ್ಲಿ ಈ ಮಾಹಿತಿ ನೀಡಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಪೀಠ, ಕುಡಿದು ವಾಹನ ಚಾಲನೆ ಮಾಡುವ ಪ್ರಕರಣಗಳ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಈ ಹಿಂದೆ ನಿರ್ದೇಶನ ನೀಡಿತ್ತು. ಕುಡಿದು ವಾಹನ ಚಾಲನೆ ಮಾಡಿ, ಮೃತಪಟ್ಟವರ ಸಂಖ್ಯೆ 2010ರಲ್ಲಿ ಎರಡು ಮಾತ್ರ. 2011ರಲ್ಲಿ 5, 2012ರಲ್ಲಿ 12 ಹಾಗೂ 2013ರಲ್ಲಿ (ಸೆಪ್ಟೆಂರ್‌ 11ರವರೆಗೆ) 17 ಪ್ರಕರಣಗಳು ವರದಿಯಾಗಿವೆ.

2010ರಲ್ಲಿ ಕುಡಿದು ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ‘ದುರದೃಷ್ಟವಂತರ’ ಸಂಖ್ಯೆ 66,930 ಆಗಿತ್ತು. 2011ರಲ್ಲಿ ಇದು 61,923, 2012ರಲ್ಲಿ 60,973 ಹಾಗೂ 2013ರಲ್ಲಿ ಇದುವರೆಗೆ 42,092 ಇಂಥ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.