ADVERTISEMENT

ಕುಮಾರಧಾರ ನದಿಯಿಂದ 16 ಟಿಎಂಸಿ ನೀರು ಲಭ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 20:00 IST
Last Updated 10 ಜನವರಿ 2014, 20:00 IST

ಬೆಂಗಳೂರು: ‘ಪಶ್ಚಿಮಾಭಿಮುಖವಾಗಿ ಹರಿಯುವ ಕುಮಾರಧಾರಾ ಮತ್ತು ಅದರ ಉಪನದಿಗಳ ನೀರನ್ನು  ಪೂರ್ವಾಭಿಮುಖವಾಗಿ ಹರಿಸುವ ಮೂಲಕ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ  ನೀರನ್ನು ಒದಗಿಸಬಹುದು’ ಎಂದು ಪ್ರೀತಿ ಕ್ಯಾಡ್‌ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಎಂಜಿನಿಯರ್‌ ವೇದಾನಂದ ಮೂರ್ತಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರಧಾರಾ ನದಿ ಹರಿಯುವ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 7,500 ಮಿ.ಮೀ ಮಳೆಯಾಗುತ್ತದೆ. ಈ ನೀರು ವ್ಯರ್ಥವಾಗಿ ಹರಿದು ನೇತ್ರಾವತಿ ನದಿ ಸೇರುತ್ತದೆ. ಇದನ್ನು ಬಳಸಿಕೊಂಡರೆ ಸಾವಿರಾರು ಗ್ರಾಮಗಳಿಗೆ ನೀರನ್ನು ಒದಗಿಸಬಹುದಾಗಿದೆ ಎಂದರು.

ಈ ಕುರಿತು ಈಗಾಗಲೆ ಸಂಸ್ಥೆಯ ವತಿಯಿಂದ  ಪೂರ್ವಭಾವಿ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಯೋಜನೆಯ ಪ್ರಕಾರ 2 ಹಂತದಲ್ಲಿ 16 ಟಿಎಂಸಿ ನೀರು ಪಡೆಯಬಹುದಾಗಿದೆ. ಮೊದಲನೆ ಹಂತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಕುಮಾರಧಾರಾ ನದಿಗೆ ಅಡ್ಡಗೋಡೆ ನಿರ್ಮಿಸಿ ನೀರನ್ನು 9 ಕಿ.ಮೀ ಸುರಂಗ ಮಾರ್ಗದ ಮೂಲಕ ಪೂರ್ವಕ್ಕೆ ಹರಿಸಿ ಹೇಮಾವತಿ ಜಲಾಶಯಕ್ಕೆ ಸೇರಿಸುವುದರಿಂದ 8 ಟಿಎಂಸಿ ನೀರನ್ನು ಗುರುತ್ವಾಕರ್ಷಣೆಯ ಮೂಲಕ  ಪಡೆಯಬಹುದಾಗಿದೆ. ಇದರಿಂದ ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ 8 ಜಿಲ್ಲೆಗಳಿಗೆ   ನೀರು ಒದಗಿಸಬಹುದಾಗಿದೆ ಎಂದು ವಿವರಿಸಿದರು.

ಯೋಜನೆಯ ಎರಡನೇ ಹಂತದಲ್ಲಿ ಕೆಳಮಟ್ಟದಲ್ಲಿರುವ ಕುಮಾರಧಾರಾ ಮತ್ತು ಬೆಟ್ಟಕುಮಾರಿ ನದಿಗಳಿಂದ 8 ಟಿಎಂಸಿ ನೀರನ್ನು ಏರು ಕೊಳವೆಯಿಂದ ತೆಗೆಯಲು ಸಾಧ್ಯವಿದೆ. ಈ ಯೋಜನೆಗೆ  ₨3,500 ಕೋಟಿ ವೆಚ್ಚವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.