ADVERTISEMENT

‘ಕುರ್–ಆನ್‌’ಹರಿದವನ ಬಂಧನ

ಆರೋಪಿ ಶೇಖ್‌ ಇರ್ಫಾನ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟ ಜನ

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST

ಬೆಂಗಳೂರು: ‘ಕುರ್‌–ಆನ್‌’ ಧರ್ಮ ಗ್ರಂಥವನ್ನು ಹರಿದು, ಅದರ ತುಣುಕುಗಳನ್ನು ರಸ್ತೆಯುದ್ದಕ್ಕೂ ಬಿಸಾಡುತ್ತಿದ್ದ ಶೇಖ್‌ ಇರ್ಫಾನ್ ಅಹಮದ್ (21) ಎಂಬಾತನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಿಗ್ಮಾ ಮಾಲ್‌ ಬಳಿ ಶನಿವಾರ ಸಂಜೆ ಕಾಣಿಸಿಕೊಂಡಿದ್ದ ಆರೋಪಿ, ತುಣುಕುಗಳನ್ನು ಫುಟ್‌ಪಾತ್‌ ಹಾಗೂ ಮುಖ್ಯರಸ್ತೆಯುದ್ದಕ್ಕೂ ಚೆಲ್ಲಾಡುತ್ತಿದ್ದ. ಅದನ್ನು ಗಮನಿಸಿದ್ದ ಸ್ಥಳೀಯರು ಆತನನ್ನು ವಿಚಾ‌ರಿಸಿದ್ದರು. ಅವರನ್ನೇ ಆತ ಬೆದರಿಸಿದ್ದ. ಆತನ ವರ್ತನೆ ಮಿತಿ ಮೀರುತ್ತಿದ್ದಂತೆ ಠಾಣೆಗೆ ತಂದು ಒಪ್ಪಿಸಿದ್ದಾರೆ ಎಂದು ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ತಿಳಿಸಿದರು.

‘ಲಿಂಗರಾಜಪುರ ನಿವಾಸಿಯಾದ ಆರೋಪಿ, 5ನೇ ತರಗತಿಗೆ ಶಾಲೆ ಬಿಟ್ಟಿದ್ದ. ನಂತರ, ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ. ‘ಕುರ್‌–ಆನ್‌’ನನ್ನು ಏಕೆ ಹರಿಯುತ್ತಿದ್ದ ಎಂಬುದು ಗೊತ್ತಾಗಿಲ್ಲ. ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದೇವೆ. ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಿದ್ದೇವೆ’ ಎಂದರು.

ADVERTISEMENT

ವಿಧಾನಸೌಧ ಎದುರೂ ಬಿಸಾಕಿದ್ದ: ಮೇ 3ರಂದು ವಿಧಾನಸೌಧ ಎದುರು ಸುತ್ತಾಡಿದ್ದ ಆರೋಪಿ, ಅಲ್ಲಿಯೂ ‘ಕುರ್‌–ಆನ್‌’ನ ಹರಿದ ತುಣುಕುಗಳನ್ನು ಚೆಲ್ಲಾ
ಡಿದ್ದ. ನಂತರ, ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

‘ಆತನ ಕೃತ್ಯವನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಹುಡುಕಾಟ ನಡೆಯುತ್ತಿತ್ತು. ಈಗ ಸಾರ್ವಜನಿಕರೇ ಆತನನ್ನು ಹಿಡಿದಿದ್ದಾರೆ’ ಎಂದರು.

ಶೇಖ್‌ ಇರ್ಫಾನ್‌ನ ಕೃತ್ಯದ ಬಗ್ಗೆ ಹೇಳಿಕೆ ನೀಡಿರುವ ಅವರ ತಂದೆ, ’ಕೆಲದಿನಗಳಿಂದ ಮಗ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಧರ್ಮಗ್ರಂಥ ವನ್ನು ಹರಿದದ್ದು ಏಕೆ ಎಂಬುದು ನನಗೂಗೊತ್ತಿಲ್ಲ’ ಎಂದಿದ್ದಾರೆ. ‘ಬಾಡಿ ವಾರಂಟ್‌ ಮೂಲಕ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದೇವೆ’ ಎಂದು ವಿಧಾನಸೌಧ ಪೊಲೀಸರು ತಿಳಿಸಿದ್ದಾರೆ.

ಬೇರೆ ಧರ್ಮದ ಹೆಸರು ಹೇಳಿದ

ವಿಧಾನಸೌಧ ಎದುರು ಧರ್ಮಗ್ರಂಥವನ್ನು ಹರಿದು ಹಾಕಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಗುಪ್ತದಳದ ಸಿಬ್ಬಂದಿ, ಆರೋಪಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

‘ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಧರ್ಮಗಳ ನಡುವೆ ಜಗಳ ಹಚ್ಚಲು ಆರೋಪಿ ಈ ರೀತಿ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸಿಗ್ಮಾ ಮಾಲ್‌ ಬಳಿ ಸ್ಥಳೀಯರಿಗೆ ಸಿಕ್ಕಿಬಿದ್ದಾಗ, ಅನ್ಯ ಧರ್ಮದ ವ್ಯಕ್ತಿ ಎಂದು ಆತ ಹೇಳಿಕೊಂಡಿದ್ದ. ಪೊಲೀಸರು ವಿಚಾರಣೆಗೆ ಒಳಪಡಿಸಿದಾಗಲೇ ನಿಜವಾದ ಹೆಸರು ಬಾಯ್ಬಿಟ್ಟ’ ಎಂದು ಗುಪ್ತದಳದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.