ಬೆಂಗಳೂರು: `ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲ ಸಚಿವರನ್ನಾಗಿ ನೇಮಕ ಮಾಡಿರುವುದು ತಪ್ಪು, ವಿ.ವಿಯ ಕುಲಪತಿಗೆ ಕಿರುಕುಳ ನೀಡುವ ಕಾರಣಕ್ಕಾಗಿಯೆ ಕೆಲವು ನೇಮಕಗಳನ್ನು ಸರ್ಕಾರ ಮಾಡಿದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ನೇರವಾಗಿ ಆಪಾದಿಸಿದರು.
ನಗರದಲ್ಲಿ ಸೋಮವಾರ ನಡೆದ ಬೆಂಗಳೂರು ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಬರೆದಿರುವ `ಹಿಯರ್ ಅಂಡ್ ದೇರ್~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ವಿಶ್ವವಿದ್ಯಾಲಯಕ್ಕೆ ನೀವು ಮಹತ್ವದ ಸೇವೆ ಸಲ್ಲಿಸಿ ಯಶಸ್ವಿ ಕುಲಪತಿ ಆಗಿದ್ದೀರ. ಆದರೆ ನಿಮಗೆ ಕಿರುಕುಳ ನೀಡಲಾಗುತ್ತಿದೆ. ನಿಮಗೆ ತೊಂದರೆ ನೀಡಲು ಯಾವುದೇ ಕಾರಣವಿಲ್ಲ. ಕುಲಪತಿಗೆ ಕುಲಸಚಿವರು ಕಿರುಕುಳ ನೀಡುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ತಪ್ಪನ್ನು ಸರಿಪಡಿಸಲು ನನಗೆ ಅಧಿಕಾರವಿಲ್ಲ. ಉತ್ತಮ ಕೆಲಸ ಮಾಡುತ್ತಿರುವ ನೀವು ಮಾತ್ರ ಈ ವಿಶ್ವವಿದ್ಯಾಲಯವನ್ನು ನಿಭಾಯಿಸಬಲ್ಲಿರಿ~ ಎಂದರು.
`ಆರಂಭದಲ್ಲಿ ಕೆಲವರು ನನಗೂ ತೊಂದರೆ ನೀಡಿದರು. ನಿಮ್ಮ ವಿಷಯದಲ್ಲೂ ಇದೇ ಆಗುತ್ತಿದೆ. ಈ ಅಡೆತಡೆಗಳನ್ನು ಎದುರಿಸಬಲ್ಲಿರಿ. ಶೈಕ್ಷಣಿಕ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಹಿಂದೆ ವಿಶ್ವವಿದ್ಯಾಲಯದ ಯಾವುದೇ ವಿಷಯದಲ್ಲಿ ಸರ್ಕಾರಗಳು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಯುಜಿಸಿ ನಿಯಮಗಳನ್ನು ಎಲ್ಲ ವಿ.ವಿಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಕುಲಪತಿಗಳ ಸಮ್ಮೇಳನದಲ್ಲಿ ನಾನು ಹೇಳಿದ್ದೇನೆ~ ಎಂದು ಅವರು ತಿಳಿಸಿದರು.
`ವಿಶ್ವವಿದ್ಯಾಲಯದಲ್ಲಿ ತಂದ ಸುಧಾರಣೆಗಳ ಬಗ್ಗೆ ತೃಪ್ತಿ ಇದೆ. ಪರೀಕ್ಷೆಯ ವಿಷಯಗಳಲ್ಲಿ ಸಂಪೂರ್ಣ ಬದಅಲಾವಣೆ ತಂದೆ. ದಿಢೀರ್ ಬದಲಾವಣೆಗೆ ಒಗ್ಗಿಕೊಳ್ಳಲಾಗದ ವಿದ್ಯಾರ್ಥಿಗಳಿಂದ ವಿರೋಧ ಎದುರಿಸಿದೆ. ವಿ.ವಿ ಒಳಗೆ ಹಾಗೂ ಹೊರಗಿನ ಸಮಾಜಘಾತುಕ ಶಕ್ತಿಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ.
ವಿ.ವಿಗೆ ಧಕ್ಕೆಯಾಗುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ತಿರುಗಿಬೀಳುವ ಮನೋಭಾವದವನು. ಎಲ್ಲ ಸವಾಲುಗಳನ್ನು ಎದುರಿಸಿ ಗೆಲವು ಕಾಣುತ್ತೇನೆ~ ಎಂದು ಪ್ರಭುದೇವ್ ಹೇಳಿದರು`ಕುಲಪತಿ ಪ್ರಭುದೇವ್ ಅವರು ಆಡಳಿತ, ಪರೀಕ್ಷೆ, ಪ್ರವೇಶ ಮುಂತಾದ ವಿಷಯಗಳಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದ್ದಾರೆ. ಅವರು ತಮ್ಮ ಪುಸ್ತಕದಲ್ಲಿ ವಿಜ್ಞಾನ, ಕ್ರೀಡೆ, ಮಾಧ್ಯಮ, ಮಹಿಳೆ ಮುಂತಾದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ.
ಯುವಕರು ಭವಿಷ್ಯದ ನಾಯಕರು ಮಾತ್ರವಲ್ಲ ಇಂದಿನ ಸಹಭಾಗಿಗಳು ಎಂಬ ಅಂಶವನ್ನೂ ಪುಸ್ತಕದಲ್ಲಿ ಬರೆದಿದ್ದಾರೆ. ಇಂತಹ ಹಲವು ಅಂಶಗಳನ್ನು ಪುಸ್ತಕದಲ್ಲಿ ಓದಬಹುದು~ ಎಂದು ಪುಸ್ತಕ ವಿಮರ್ಶೆ ಮಾಡಿದ ಮನಶಾಸ್ತ್ರಜ್ಞ ಎಂ.ಎ.ಅತಾವುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.ಕುಲಪತಿ ಅವರ ಪುತ್ರ ನಿತಿನ್ ಪ್ರಭುದೇವ್ ಸ್ವಾಗತಿಸಿದರು. ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಶಕ್ತಿ ಬುಕ್ಸ್‌ನ ಜಿ.ಸಂತಾನಮ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.