ADVERTISEMENT

ಕುಲಪತಿ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 20:09 IST
Last Updated 7 ಮಾರ್ಚ್ 2018, 20:09 IST

ಬೆಂಗಳೂರು: ರಾಜ್ಯದ 8 ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಹುದ್ದೆಗಳು ಖಾಲಿಇವೆ. ಇವುಗಳಿಗೆ ಕಾಯಂ ಕುಲಪತಿಗಳನ್ನು ನೇಮಕ ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಒತ್ತಾಯಿಸಿದೆ.

ಈ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ರಾಜ್ಯದಾದ್ಯಂತ ‘ವಿಶ್ವವಿದ್ಯಾಲಯಗಳನ್ನು ಉಳಿಸಿ, ಶಿಕ್ಷಣ ಉಳಿಸಿ’ ಆಂದೋಲನವನ್ನು ಆರಂಭಿಸಲಾಗಿದೆ. 

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ ಹರ್ಷ ನಾರಾಯಣ, ‘ಕುಲಪತಿ ಹುದ್ದೆ ಖಾಲಿ ಇರುವ ಕಾರಣ ಈ ವಿಶ್ವವಿದ್ಯಾಲಯಗಳಲ್ಲಿ ಪ್ರಮುಖ ಶೈಕ್ಷಣಿಕ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಂಜೂರಾಗಿರುವ ಪ್ರಾಧ್ಯಾಪಕರ ಹುದ್ದೆಗಳ ಪೈಕಿ ಶೇ 50ರಷ್ಟು ಖಾಲಿ ಇವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಖಾಲಿ ಇರುವ ಕುಲಪತಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಬೋಧಕ, ಬೋಧ ಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್‌ ಹಾವಳಿ ಹೆಚ್ಚುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ನಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.