ADVERTISEMENT

ಕುಲಾಂತರಿ ತಳಿ ಪರೀಕ್ಷೆಗೆ ಸ್ವಾಯತ್ತ ವ್ಯವಸ್ಥೆ ಅಗತ್ಯ

ಹಿರಿಯ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2013, 4:59 IST
Last Updated 9 ಜನವರಿ 2013, 4:59 IST
ನಗರದ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿರುವ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನಿ, ರಾಜ್ಯಸಭಾ ಸದಸ್ಯ ಪ್ರೊ.ಎಂ.ಎಸ್. ಸ್ವಾಮಿನಾಥನ್ (ಎಡತುದಿ) ಮತ್ತು ಕೇಂದ್ರ ಯೋಜನಾ ಆಯೋಗದ ಸದಸ್ಯ ಅಭಿಜಿತ್ ಸೇನ್ (ಬಲತುದಿ) ನಡುವಿನ ಒಂದು ರಸಗಳಿಗೆ 	-ಪ್ರಜಾವಾಣಿ ಚಿತ್ರ
ನಗರದ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿರುವ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನಿ, ರಾಜ್ಯಸಭಾ ಸದಸ್ಯ ಪ್ರೊ.ಎಂ.ಎಸ್. ಸ್ವಾಮಿನಾಥನ್ (ಎಡತುದಿ) ಮತ್ತು ಕೇಂದ್ರ ಯೋಜನಾ ಆಯೋಗದ ಸದಸ್ಯ ಅಭಿಜಿತ್ ಸೇನ್ (ಬಲತುದಿ) ನಡುವಿನ ಒಂದು ರಸಗಳಿಗೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಕುಲಾಂತರಿ ತಳಿಗಳ ಮೇಲೆ ಜನರಲ್ಲಿ ವಿಶ್ವಾಸ ಮೂಡಬೇಕಾದರೆ ಅವುಗಳಿಗೆ ಪ್ರಮಾಣ ಪತ್ರ ನೀಡುವ ಜೈವಿಕ ಸುರಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಸ್ವಾಯತ್ತಗೊಳಿಸಬೇಕು' ಎಂದು ಕೃಷಿ ವಿಜ್ಞಾನಿ, ರಾಜ್ಯಸಭಾ ಸದಸ್ಯ ಪ್ರೊ. ಎಂ.ಎಸ್. ಸ್ವಾಮಿನಾಥ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಉನ್ನತ ಶಿಕ್ಷಣ ಸಂಸ್ಥೆ (ಎನ್‌ಐಎಎಸ್) ಮತ್ತು ಎಂ.ಎಸ್. ಸ್ವಾಮಿನಾಥನ್ ಪ್ರತಿಷ್ಠಾನ ಜೊತೆಯಾಗಿ `ಭಾರತದಲ್ಲಿ ಕೃಷಿ ಉತ್ಪಾದನೆ ಹೆಚ್ಚಳ ಮತ್ತು ಸ್ಥಿರತೆ: ಭವಿಷ್ಯದ ಹಾದಿ' ಕುರಿತು ಏರ್ಪಡಿಸಿರುವ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಅವರು ಪ್ರಧಾನ ಭಾಷಣ ಮಾಡಿದರು.

`ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಕುಳಿತು ನೀತಿ ರೂಪಿಸುವ ಅಧಿಕಾರಿಗಳೇ ಜೈವಿಕ ಸುರಕ್ಷಾ ಪ್ರಾಧಿಕಾರಕ್ಕೆ ಬಂದು ಅದರ ಪರಿಣಾಮ ಪರೀಕ್ಷಿಸುವುದಾದರೆ ಯಾರಿಗೂ ವಿಶ್ವಾಸ ಬರುವುದಿಲ್ಲ' ಎಂದು ಪ್ರತಿಪಾದಿಸಿದರು.

`ಅಮೆರಿಕದಲ್ಲಿ ಕುಲಾಂತರಿ ತಳಿಗಳನ್ನು ಮೂರು ಸ್ವಾಯತ್ತ ಸಂಸ್ಥೆಗಳು ಪರೀಕ್ಷೆಗೆ ಒಳಪಡಿಸುತ್ತವೆ. ಮೂರೂ ಸಂಸ್ಥೆಗಳಿಂದ ಪ್ರಮಾಣ ಪತ್ರ ಸಿಕ್ಕರೆ ಮಾತ್ರ ಅಂತಹ ತಳಿಗಳು ಆ ದೇಶದಲ್ಲಿ ಚಲಾವಣೆಗೆ ಬರುತ್ತವೆ. ಹೀಗಾಗಿ ಅಲ್ಲಿಯ ಜನಕ್ಕೆ ಕುಲಾಂತರಿ ತಳಿಗಳ ಮೇಲೆ ಸಾಕಷ್ಟು ಭರವಸೆ ಇದೆ' ಎಂದು ವಿವರಿಸಿದರು.

`ಜೈವಿಕ ಸುರಕ್ಷತೆಯು ಭೂಮಿ, ನೀರು, ಅರಣ್ಯ ಸೇರಿದಂತೆ ನೈಸರ್ಗಿಕ ಸಂಪನ್ಮೂಲದ ಉಳಿವು, ಪ್ರಾಣಿಗಳ ರಕ್ಷಣೆ ಮತ್ತು ಮನುಷ್ಯರ ಆರೋಗ್ಯ ಒಳಗೊಂಡ ಸಂಕೀರ್ಣ ವಿಷಯವಾಗಿದೆ. ಯಾವುದೇ ಕಾರಣಕ್ಕೂ ಈ ಸಂಗತಿಯನ್ನು ಅಲಕ್ಷಿಸುವಂತಿಲ್ಲ' ಎಂದು ಎಚ್ಚರಿಕೆ ಸಂದೇಶ ನೀಡಿದರು.
`ಪರ್ಯಾಯ ಆಹಾರ ಮೂಲಗಳಾದ ಮೀನು ಮತ್ತು ಕೋಳಿ ಉತ್ಪಾದನೆ ಹೆಚ್ಚಳದ ಕಡೆಗೂ ಗಮನಹರಿಸಬೇಕಿದೆ' ಎಂದ ಅವರು, `ಕೃಷಿ ಎಂಬುದು ಬೇಕೆಂದಾಗ ಆಹಾರ ಉತ್ಪಾದಿಸಿಕೊಡುವ ಯಂತ್ರವಲ್ಲ. ಅದು ಜೀವಸಂಕುಲದ ಬೆನ್ನೆಲುಬು ಎಂಬುದನ್ನು ನೆನಪಿಡಬೇಕು' ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿಎಆರ್‌ಇ) ಕಾರ್ಯದರ್ಶಿ ಡಾ.ಎಸ್.ಅಯ್ಯಪ್ಪನ್, `ನೌಕರಿದಾರರಂತೆ ಕೃಷಿಕರಿಗೂ ಪ್ರತಿ ತಿಂಗಳು ಆದಾಯ ಸಿಗುವಂತಾದದರೆ ಕೃಷಿಯಲ್ಲಿ ಸ್ಥಿರತೆ ತರಲು ಸಾಧ್ಯ. ಎಲ್ಲ ರೀತಿಯ ವಾತಾವರಣದಲ್ಲಿ ಕೃಷಿ ವ್ಯವಸ್ಥೆ ಹೇಗಿರಬೇಕು ಎಂಬುದಕ್ಕೆ ಡಿಎಆರ್‌ಇ 300 ಮಾದರಿಗಳನ್ನು ಸಿದ್ಧಪಡಿಸಿದೆ' ಎಂದು ಹೇಳಿದ ಅವರು, `ಆಹಾರ ಪದಾರ್ಥವಾಗಿ ಸಿರಿಧಾನ್ಯಗಳ ಬಳಕೆ ಹೆಚ್ಚಬೇಕಿದೆ' ಎಂದು ಆಶಿಸಿದರು.

ಇನ್ನೋವೇಶನ್ಸ್ ಇನ್ ರೈಸ್ ಪ್ರೊಡಕ್ಷನ್ ಕೃತಿಯನ್ನು (ಲೇಖಕರು: ಡಾ.ಪಿ.ಕೆ.ಶೆಟ್ಟಿ, ಡಾ.ಎಂ.ಆರ್. ಹೆಗಡೆ ಮತ್ತು ಡಾ.ಎಂ. ಮಹದೇವಪ್ಪ) ಸ್ವಾಮಿನಾಥನ್ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.