ADVERTISEMENT

ಕುಸ್ಮಾ ಅರ್ಜಿ ವಿಭಾಗೀಯ ಪೀಠಕ್ಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST

ಬೆಂಗಳೂರು: ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಸಂಗ್ರಹಿಸಬಹುದಾದ ಶುಲ್ಕದ ಪ್ರಮಾಣ ಕುರಿತು ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ವರ್ಗಾಯಿಸಿದ್ದಾರೆ.

ಅರ್ಜಿಯ ವಿಚಾರಣೆ ವೇಳೆ ರಮೇಶ್ ಅವರು `ಸಂವಿಧಾನದ 21(ಎ) ಕಲಂ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ, 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕಲ್ಲವೇ?' ಎಂದು `ಕುಸ್ಮಾ' ಪರ ವಕೀಲರನ್ನು ಮೌಖಿಕವಾಗಿ ಈ ಹಿಂದೆ ಪ್ರಶ್ನಿಸಿದ್ದರು.
ಇದಕ್ಕೆ ಬುಧವಾರ ಪ್ರತಿವಾದ ಮಂಡಿಸಿದ `ಕುಸ್ಮಾ' ಪರ ವಕೀಲ ಕೆ.ವಿ. ಧನಂಜಯ, `21(ಎ) ಕಲಂ ಅನ್ವಯ ಕಾನೂನು ರಚನೆ ಮಾಡಿದರೆ ಮಾತ್ರ, ಶಿಕ್ಷಣ ಮೂಲಭೂತ ಹಕ್ಕಾಗುತ್ತದೆ, ಉಚಿತವಾಗಿ ದೊರೆಯುವಂತೆ ಆಗುತ್ತದೆ.

ಶಿಕ್ಷಣ ಹಕ್ಕು ಕಾಯ್ದೆಯು (ಆರ್‌ಟಿಇ) ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಖಾಸಗಿ ಶಾಲೆಗಳು ಶೇಕಡ 25ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಹೇಳಿದೆ. ಅವರಿಗೆ ಉಚಿತ ಶಿಕ್ಷಣವೂ ದೊರೆಯುತ್ತಿದೆ. ಆರ್‌ಟಿಇ ವ್ಯಾಪ್ತಿಯಲ್ಲಿ 21(ಎ) ಕಲಂ ಅನ್ನು ಅರ್ಥೈಸಬೇಕು' ಎಂದು ವಿವರಿಸಿದರು.

`ಕುಸ್ಮಾ' ಸಲ್ಲಿಸಿದ ಅರ್ಜಿ ಮಾತ್ರವಲ್ಲದೆ, ಕೆಲವು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನೂ ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಸಂಗ್ರಹಿಸುತ್ತಿವೆ ಎಂದು ಅವರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT