ಕೆ.ಆರ್.ಪುರ: ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯಾಗಿದ್ದ ಉಚಿತ ಟ್ಯಾಂಕರ್ ನೀರು ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
`ಕೆ.ಆರ್.ಪುರದ ನೀರಿನ ಸಮಸ್ಯೆ ನಿವಾರಣೆಗೆ ಜಲಮಂಡಳಿ ಹಾಗೂ ಬಿಬಿಎಂಪಿ ಸದಸ್ಯರು ಉಚಿತವಾಗಿ ಟ್ಯಾಂಕರ್ ನೀರು ಪೂರೈಕೆಯ ವ್ಯವಸ್ಥೆ ಮಾಡಿದ್ದರು. ಆದರೆ ಉಚಿತ ನೀರು ಪೂರೈಕೆಯ ಟ್ಯಾಂಕರ್‌ಗಳ ನಿರ್ವಹಣೆ ಸರಿಯಾಗಿಲ್ಲದೇ ಇರುವುದರಿಂದ ದಿನವೂ ಟ್ಯಾಂಕರ್‌ಗಳಿಗೆ ನೂಕು ನುಗ್ಗಲು ಹೆಚ್ಚಾಗುತ್ತಿದೆ~ ಎಂದು ಸ್ಥಳೀಯರಾದ ಮುರಳಿ ದೂರಿದ್ದಾರೆ.
`ಬಡಾವಣೆಗಳಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಯ ವ್ಯವಸ್ಥೆಯೂ ಸರಿಯಾಗಿಲ್ಲ. ಒಡೆದಿರುವ ಪೈಪುಗಳನ್ನು ಬದಲಾಯಿಸಲು ಅಧಿಕಾರಿಗಳು ಮೀನಾಮೇಶ ಎಣಿಸುತ್ತಿದ್ದಾರೆ. ಕೊಳವೆ ಬಾವಿಗಳ ಸುತ್ತ ಮಣ್ಣು ಶೇಖರಣೆಯಾಗಿದ್ದು ದೂರು ನೀಡಿದರೂ ಅದನ್ನು ತೆಗೆಸಿಲ್ಲ~ ಎಂಬುದು ಇಸ್ಲಾಂಪುರ ನಿವಾಸಿ ಜಾನ್ ಅವರ ಅಳಲು. ಇನ್ನು ಪ್ರಿಯಾಂಕ ನಗರದಲ್ಲಿ ಜಲಮಂಡಳಿಯಿಂದಾಗಲೀ ಅಥವಾ ಬಿಬಿಎಂಪಿ ಸದಸ್ಯರಿಂದಾಗಲೀ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಒಂದು ಟ್ಯಾಂಕ್‌ಗೆ 500 ರಿಂದ 600 ರೂಪಾಯಿ ಕೊಟ್ಟು ನೀರು ಕೊಳ್ಳಬೇಕಾಗಿದೆ ಎಂದು ಸ್ಥಳೀಯರಾದ ರಾಜು ದೂರಿದರು.
ತ್ರಿವೇಣಿ ಬಡಾವಣೆ ನಿವಾಸಿಗಳು ಇಲ್ಲಿನ ಸರ್ಕಾರಿ ಶಾಲೆಯ ಕಾಂಪೌಂಡಿಗೆ ಹೊಂದಿಕೊಂಡಂತೆ ಇರುವ ಒಂದೇ ನಲ್ಲಿಯಿಂದ ನೀರು ಪಡೆಯುವುದು ಅನಿವಾರ್ಯವಾಗಿದೆ.
`ಸ್ಥಳೀಯರ ಕೋರಿಕೆಯ ಮೇರೆಗೆ ಪ್ರತಿವಾರ್ಡಿಗೆ 6 ರಿಂದ 7 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ತುರ್ತು ಸಂದರ್ಭದಲ್ಲಿ ಒಂದೆರಡು ಟ್ಯಾಂಕರ್‌ಗಳನ್ನು ಹೆಚ್ಚುವರಿಯಾಗಿ ಕಳುಹಿಸುತ್ತೇವೆ. ಆದರೂ ಈ ಬಡಾವಣೆಗಳ ನೀರಿನ ಸಮಸ್ಯೆ ತಳ್ಳಿಹಾಕುವಂತಿಲ್ಲ~ ಎಂದು ಜಲಮಂಡಳಿ ಸಹಾಯಕ ಎಂಜಿನಿಯರ್ ಶ್ರೀಧರ್ ತಿಳಿಸಿದರು. `ನೀರಿನ ಸಮಸ್ಯೆ ಹೆಚ್ಚಾದ ಸಂದರ್ಭಗಳಲ್ಲಿ ತಮ್ಮನ್ನು (ಮೊಬೈಲ್: 9591987968) ಅಥವಾ ಸಹಾಯಕ ಎಂಜಿನಿಯರ್ ಅವರನ್ನು (ಮೊಬೈಲ್ ಸಂಖ್ಯೆ: 9591987971ಸಂಪರ್ಕಿಸಬಹುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.