ADVERTISEMENT

ಕೆಪಿಎಸ್‌ಸಿ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:39 IST
Last Updated 16 ಸೆಪ್ಟೆಂಬರ್ 2013, 19:39 IST

ಬೆಂಗಳೂರು: ‘ಕೆಪಿಎಸ್‌ಸಿ ಭ್ರಷ್ಟಾಚಾರ ವನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸೆ.21 ರಂದು ಪ್ರತಿಭಟನಾ ಸಭೆ ನಡೆಸಿ, ನಂತರ ಕೆಪಿಎಸ್‌ಸಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ  ಕೆ.ಎಸ್‌.ಶಿವರಾಮು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1998, 1999, 2004, 2011 ರಲ್ಲಿ ನಡೆದ ಕೆಪಿಎಸ್‌ಸಿ ನೇಮಕಾತಿಯ ಅಕ್ರಮ ಗಳನ್ನು ಕುರಿತಂತೆ ಸಿಐಡಿ  ನೀಡಿರುವ ತನಿಖಾ ವರದಿಯನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
‘ಸೆ. 20 ರಂದು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಂದ ಪ್ರತಿಭಟನಾ ಜಾಥಾ ಹೊರಡಲಿದ್ದು, ನಗರವನ್ನು  ಸೆ.21 ರಂದು ತಲುಪಲಿವೆ’ ಎಂದು  ಅವರು ದರು.

‘ಪ್ರತಿಭಟನಾ ಸಭೆಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್‌, ಲೇಖಕಿ ಬಿ.ಟಿ.ಲಲಿತಾನಾಯಕ್‌, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕಾನಾಥ್‌, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಕರ್ನಾಟಕ ಲೋಕ ಸೇವಾ ಆಯೋಗವು 1998, 99, 2004, 2011 ರಲ್ಲಿನ ಕೆಎಎಸ್ ಹುದ್ದೆಗಳ ನೇಮಕಾತಿಯಲ್ಲಿ ನಡೆಸಿರುವ
ಅಕ್ರಮ ಅವ್ಯವಹಾರಗಳ ಕುರಿತು ಸಿಐಡಿ ವರದಿ ನೀಡಿದೆ. ಇದನ್ನು ಆಧರಿಸಿ ನೇಮಕಾತಿ ಪಟ್ಟಿಗಳನ್ನು ಸರ್ಕಾರ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.