ADVERTISEMENT

ಕೆಪಿಸಿಸಿ ವೀಕ್ಷಕರ ಸಭೆ: ಅಭಿಪ್ರಾಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:45 IST
Last Updated 12 ಸೆಪ್ಟೆಂಬರ್ 2013, 19:45 IST

ಬೆಂಗಳೂರು: ಲೋಕಸಭಾ ಚುನಾ ವಣೆಗೆ ಸಂಭವ­ನೀಯ ಅಭ್ಯರ್ಥಿಗಳನ್ನು ಗುರುತಿಸಲು ಕೆಪಿಸಿಸಿ ನಿಯೋಜಿಸಿರುವ ಪಕ್ಷದ ವೀಕ್ಷಕರು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಿದರು.

ವೀರಣ್ಣ ಮತ್ತಿಕಟ್ಟಿ ಮತ್ತು ನಿಸಾರ್‌ ಅಹಮ್ಮದ್‌ ಅವರನ್ನು ಒಳಗೊಂಡ ತಂಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಿತು. ಗೋಪಾಲ ಭಂಡಾರಿ ಮತ್ತು ಎನ್‌.ಎಸ್‌.ರತ್ನಪ್ರಭಾ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದರು. ವೀರಕುಮಾರ್‌ ಪಾಟೀಲ್‌, ಎಚ್‌.ಸಿ.ದಾಸೇಗೌಡ ಮತ್ತು ಬಿ.ಸಿ.ಗೀತಾ ಅವರನ್ನೊಳಗೊಂಡ ವೀಕ್ಷಕರ ತಂಡ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಿತು.

ಬೆಂಗಳೂರು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಸಚಿವ ದಿನೇಶ್‌ ಗುಂಡೂ­ರಾವ್‌, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌.ಟಿ.ಸೋಮಶೇಖರ್‌, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜು, ಶಾಸಕ ಆರ್‌.ವಿ. ದೇವರಾಜು ಸಭೆಯಲ್ಲಿ ಹಾಜರಿದ್ದರು.

ಈ ಕ್ಷೇತ್ರಗಳ ವ್ಯಾಪ್ತಿಯ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಮೂರೂ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ವೀಕ್ಷಕರನ್ನು ಭೇಟಿಮಾಡಿ ಅಭಿಪ್ರಾಯ ಸಲ್ಲಿಸಿದರು.

ಕೆಲವರ ಹೆಸರು ಚರ್ಚೆಗೆ: ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿರುವ ವೀಕ್ಷಕರು ರಹಸ್ಯವಾಗಿ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸುವರು. ಎಐಸಿಸಿ ನಿಯೋಜಿಸಿರುವ ವೀಕ್ಷಕರ ತಂಡ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಿದೆ. ಈ ನಡುವೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಯವರ ನಿಕಟವರ್ತಿ­ಗಳ ತಂಡ ಕೂಡ ಮಾಹಿತಿ ಸಂಗ್ರಹಿಸಲು ರಾಜ್ಯಕ್ಕೆ ಬರಲಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್‌, ಮಾಜಿ ಶಾಸಕರಾದ ಬಿ.ಎಲ್‌.ಶಂಕರ್‌, ನೆ.ಲ. ನರೇಂದ್ರಬಾಬು ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ರಾಜ್ಯಸಭಾ ಸದಸ್ಯ ಎಸ್‌.ಎಂ.ಕೃಷ್ಣ, ನಿವೃತ್ತ ಐಪಿಎಸ್‌ ಅಧಿಕಾರಿ ಕೆ.ಸಿ.ರಾಮಮೂರ್ತಿ, ಯು.ಬಿ.ವೆಂಕಟೇಶ್‌ ಅವರ ಹೆಸರನ್ನು ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್‌, ಮಾಜಿ ಸಂಸದ ಎಚ್‌.ಟಿ.ಸಾಂಗ್ಲಿಯಾನ, ಮಾಜಿ ಸಚಿವ ಪಿ.ಸಿ.ಅಲೆಕ್ಸಾಂಡರ್‌ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ವಿವಿಧ ತಂಡಗಳು ಸಲ್ಲಿಸುವ ವರದಿ ಗಳನ್ನು ಕೆಪಿಸಿಸಿ ಮತ್ತು ಎಐಸಿಸಿ ಹಂತದಲ್ಲಿ ಪರಿಶೀ ಲಿಸಲಾಗುತ್ತದೆ. ನಂತರದಲ್ಲಿ ಪಷದ ಚುನಾವಣಾ ಸಮಿತಿ ಸಲ್ಲಿಸುವ ಶಿಫಾರಸುಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.