ಬೆಂಗಳೂರು: ಕಲುಷಿತಗೊಳ್ಳುತ್ತಿರುವ ಕೆರೆಗಳ ಬಗ್ಗೆ ಅಲ್ಲಿ ಸೇರಿದ್ದ ಮಕ್ಕಳಲ್ಲಿ ಆತಂಕ, ನೋವು ಇತ್ತು. ಇದನ್ನು ಚಿತ್ರಕಲೆ ಹಾಗೂ ಬೀದಿನಾಟಕದ ಮೂಲಕ ಅಭಿವ್ಯಕ್ತಿಸಿದರು. ಕೆರೆಗಳ ಸಂರಕ್ಷಣೆಯ ಮಹತ್ವವನ್ನು ಸಾರಿದರು.
ನಮ್ಮ ಬೆಂಗಳೂರು ಪ್ರತಿಷ್ಠಾನವು ಬನ್ನೇರುಘಟ್ಟ ರಸ್ತೆಯಲ್ಲಿರುವ ಅರಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆರೆ ಹಬ್ಬದಲ್ಲಿ ಕಂಡುಬಂದ ದೃಶ್ಯಗಳಿವು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಿಜಿಎಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೆರೆಗೆ ಸಂಬಂಧಿಸಿದ ವಿಷಯಗಳನ್ನು ಇಟ್ಟುಕೊಂಡು ಚಿತ್ರಗಳನ್ನು ಬಿಡಿಸಿದರು. ನಗರೀಕರಣ, ಕೈಗಾರೀಕರಣದಿಂದಾಗಿ ಕೆರೆಗಳು ನಾಶ ಹೊಂದುತ್ತಿರುವುದರ ಬಗ್ಗೆ ಬೆಳಕು ಚೆಲ್ಲಿದರು.
‘ನಗರದಲ್ಲಿರುವ ಕೆರೆಗಳು ಮಲಿನಗೊಳ್ಳುತ್ತಿವೆ. ದೇವರು ಕೊಟ್ಟ ಕೆರೆಗಳನ್ನು ಮನುಷ್ಯರು ಹಾಳು ಮಾಡುತ್ತಿದ್ದಾರೆ. ಇದೇ ವಿಷಯವನ್ನು ಇಟ್ಟುಕೊಂಡು ಚಿತ್ರ ಬರೆದೆ. ತೃತೀಯ ಬಹುಮಾನ ಬಂದಿರುವುದಕ್ಕೆ ತುಂಬ ಖುಷಿ ಆಗಿದೆ’ ಎಂದು ಬಿಜಿಎಸ್ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಅದಿತಿ ಮಿಶ್ರಾ ಸಂತಸ ವ್ಯಕ್ತಪಡಿಸಿದಳು.
ಬೀದಿನಾಟಕದ ಮೂಲಕ ಜಾಗೃತಿ: ಅರ ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಬೀದಿನಾಟಕಕ್ಕೆ ಪ್ರಥಮ ಬಹುಮಾನ ದೊರೆಯಿತು. ಕೆರೆ ಮಲಿನಗೊಳ್ಳಲು ಕಾರಣವಾದ ಅಂಶಗಳು ಹಾಗೂ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇದು ತಿಳಿಸಿಕೊಟ್ಟಿತು.
‘ಕೆರೆ ಸಂರಕ್ಷಣೆ ವಿಷಯವನ್ನು ಇಟ್ಟುಕೊಂಡು ಬೀದಿನಾಟಕವನ್ನು ಪ್ರದರ್ಶಿಸಿದೆವು. ನಮ್ಮ ಗುರುಗಳಾದ ಸಂಜೀವಿನಿ ಅವರು ಈ ನಾಟಕವನ್ನು ಬರೆದುಕೊಟ್ಟಿದ್ದರು. ಒಂದು ದಿನದಲ್ಲಿ ಅಭ್ಯಾಸ ಮಾಡಿ ಪ್ರಸ್ತುತಪಡಿಸಿದೆವು’ ಎಂದು ತಂಡದ ನಾಯಕಿ ಚಂದನಾ ತಿಳಿಸಿದಳು. ಬಿಜಿಎಸ್ ಶಾಲೆಯ ವಿದ್ಯಾರ್ಥಿನಿಯರು ಹಾಡು, ನೃತ್ಯದೊಂದಿಗೆ ಪ್ರಸ್ತುತಪಡಿಸಿದ ಬೀದಿನಾಟಕ ಗಮನ ಸೆಳೆಯಿತು. ‘ನಾವು ಬಂದೇವ... ನಾವು ಬಂದೇವ... ಕೆರೆಗಳ ನೋಡಲಿಕ... ಅದರ ರಕ್ಷಣೆ ಬಗ್ಗೆ ತಿಳಿದುಕೊಳ್ಳಲಿಕ...’ ಎಂದು ಗೀಗಿ ಪದದ ಧಾಟಿಯಲ್ಲಿ ಹಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.
6ನೇ ತರಗತಿ ವಿದ್ಯಾರ್ಥಿನಿ ಮಹೇಶ್ವರಿ ‘ದೇವಿ ಭುವನ ಮನ ಮೋಹಿನಿ’ ಗೀತೆಯನ್ನು ಲಯಬದ್ಧವಾಗಿ ಹಾಡುವ ಮೂಲಕ ಸಭಿಕರ ಚಪ್ಪಾಳೆ ಗಿಟ್ಟಿಸಿದಳು. ಆಕೆಗೆ ವಿಶೇಷ ಬಹುಮಾನ ನೀಡಲಾಯಿತು. ಶಾಲೆಯ ಆವರಣದಲ್ಲಿ ನೇರಳೆ, ಸೀಬೆ, ಸಪೋಟ ಗಿಡಗಳನ್ನು ನೆಡ ಲಾಯಿತು.
ಕೆರೆ ಸಂರಕ್ಷಣೆಗೆ ಒತ್ತು: ‘ಅರಕೆರೆ ಕೆರೆಯನ್ನು ಸಂರಕ್ಷಿಸಬೇಕು. ಕೆರೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಅನಂತಕುಮಾರ್, ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ಜತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.
ಕೆರೆ ವರದಿ ಸಲ್ಲಿಕೆ
ಅರಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಿಜಿಎಸ್ ಶಾಲೆಯ 15 ವಿದ್ಯಾರ್ಥಿಗಳು ಅರಕೆರೆ ಕೆರೆಯಲ್ಲಿರುವ ಮೀನುಗಳು, ಪಕ್ಷಿ ಸಂಕುಲ ಹಾಗೂ ಮರಗಳ ಬಗ್ಗೆ ಸಮೀಕ್ಷೆ ನಡೆಸಿದರು. ಅದರ ವರದಿಯನ್ನು ಅದಮ್ಯ ಚೇತನ ಸಂಸ್ಥೆಗೆ ನೀಡಿದರು.
* ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂತಹ ದುಸ್ಥಿತಿ ಅರಕೆರೆ ಕೆರೆಗೆ ಬರದಂತೆ ನೋಡಿಕೊಳ್ಳಬೇಕು.
- ಶ್ರೀಧರ್ ಪಬ್ಬಿಶೆಟ್ಟಿ, ಸಿಇಒ, ನಮ್ಮ ಬೆಂಗಳೂರು ಪ್ರತಿಷ್ಠಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.