ADVERTISEMENT

ಕೆರೆಗೆ ಕಟ್ಟಡ ತ್ಯಾಜ್ಯ ಸುರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 20:10 IST
Last Updated 7 ಜುಲೈ 2017, 20:10 IST
ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ತಹಶೀಲ್ದಾರ್ ತೇಜಸ್ ಕುಮಾರ್, ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್, ಮಂಜುನಾಥ್ ಅವರನ್ನೊಳಗೊಂಡ ತಂಡದೊಂದಿಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರು ಕೆರೆ ಪರಿಶೀಲನೆ ನಡೆಸಿದರು
ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ತಹಶೀಲ್ದಾರ್ ತೇಜಸ್ ಕುಮಾರ್, ಪಾಲಿಕೆ ಸದಸ್ಯ ಎಸ್.ಜಿ. ನಾಗರಾಜ್, ಮಂಜುನಾಥ್ ಅವರನ್ನೊಳಗೊಂಡ ತಂಡದೊಂದಿಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಅವರು ಕೆರೆ ಪರಿಶೀಲನೆ ನಡೆಸಿದರು   

ಬೆಂಗಳೂರು: ‘ಕೆರೆಗೆ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿರುವುದು ತಿಳಿದು ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಎಚ್ಚರಿಕೆ ನೀಡಿದರು.

ವಿಕಾಸ್‌ ಸಂಘಟನೆ ನೀಡಿದ ದೂರಿನ ಮೇರಿಗೆ ಕೆ.ಆರ್‌.ಪುರ ಕ್ಷೇತ್ರದ ವಿಭೂತಿಪುರ, ದೊಡ್ಡನೆಕ್ಕುಂದಿ ಹಾಗೂ ಚಿನ್ನಪ್ಪನಹಳ್ಳಿ ಕೆರೆಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ವಿಭೂತಿಪುರ ಕೆರೆ ಅಂಗಳದಲ್ಲಿ ಕೆರೆಗೆ ಅಳವಡಿಸಿರುವ ತಂತಿ ಬೇಲಿ  ಹಾಗೂ ಗೇಟನ್ನು ಮುರಿದು ತ್ಯಾಜ್ಯ ಸುರಿಯುತ್ತಿದ್ದಾರೆ. ಈ ಬಗ್ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮಕೈಗೊಳ್ಳಲಿಲ್ಲ’ ಎಂದು ಅವರು ಲೋಕಾಯುಕ್ತರಿಗೆ ದೂರಿದರು.

‘ರಾತ್ರೋರಾತ್ರಿ ಕೆರೆಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಅಲ್ಲದೇ ಇಲ್ಲಿಗೆ ಬರುವ ಟ್ರಾಕ್ಟರ್‌ಗಳಿಗೆ ನಂಬರ್ ಪ್ಲೇಟ್‌ಗಳೇ  ಇರುವುದಿಲ್ಲ. ಕೆರೆಯ ಸುತ್ತ ಹಾಕಿರುವ ತಂತಿಬೇಲಿಯನ್ನೂ ಹಾಳು ಮಾಡಿದ್ದಾರೆ. ಶೀಘ್ರ ಈ ಬಗ್ಗೆ ಗಮನ ಹರಿಸಿ, ಕೆರೆಯನ್ನು ಸಂರಕ್ಷಿಸಬೇಕು’ ಎಂದು ಸ್ಥಳೀಯರು ಮನವಿ ಮಾಡಿದರು.

ಕೆರೆ ಅಭಿವೃದ್ಧಿ ಕುರಿತು ಮತ್ತಷ್ಟು  ಚರ್ಚಿಸಲು 19 ರಂದು ಸಭೆ ಕರೆಯಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.