ADVERTISEMENT

ಕೆರೆಗೆ ಕಲುಷಿತ ನೀರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:41 IST
Last Updated 20 ಏಪ್ರಿಲ್ 2018, 19:41 IST
ಒಳಚರಂಡಿ ನೀರಿನಿಂದಾಗಿ ಭಾರ್ಗಾವತಿ ಕೆರೆಯ ನೀರು ಕಪ್ಪುಬಣ್ಣಕ್ಕೆ ತಿರುಗಿದೆ
ಒಳಚರಂಡಿ ನೀರಿನಿಂದಾಗಿ ಭಾರ್ಗಾವತಿ ಕೆರೆಯ ನೀರು ಕಪ್ಪುಬಣ್ಣಕ್ಕೆ ತಿರುಗಿದೆ   

ಮಾಗಡಿ: ಪಟ್ಟಣದ ಒಳಚರಂಡಿಯ ನೀರು ಭಾರ್ಗಾವತಿ ಕೆರೆಗೆ ಹರಿದು ನೀರು ಕಲುಷಿತವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಯ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪರಂಗಿ ಚಿಕ್ಕನ ಪಾಳ್ಯದ ಬಳಿ ಇರುವ ಕಲುಷಿತ ನೀರಿನ ಶುದ್ಧೀಕರಣ ಘಟಕಕ್ಕೆ ಸ್ಥಳೀಯ ಗ್ರಾಮಸ್ಥರ ಮನವಿ ಮೇರೆಗೆ ಭೇಟಿ ನೀಡಿ, ಪರಿಶೀಲಿಸಿ ಅವರು ಮಾತನಾಡಿದರು.

ಬಹುಕೋಟಿ ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪುರಸಭೆ ವತಿಯಿಂದ ಮಾಗಡಿಯಲ್ಲಿ ಒಳಚರಂಡಿ ಕಾಮಗಾರಿ 2014 ರ ಜುಲೈ 30ರಂದು ಆರಂಭವಾಯಿತು.

ADVERTISEMENT

ಪಟ್ಟಣದ ಶೌಚಾಲಯಗಳ ಕಲುಷಿತ ವನ್ನು ಒಳಚರಂಡಿ ಕೊಳವೆ ಮಾರ್ಗದ ಮೂಲಕ ಸಾಗಿಸಿ ಪರಂಗಿ ಚಿಕ್ಕನ ಪಾಳ್ಯ – ಪುರ ಗ್ರಾಮದ ರಸ್ತೆಯ ಬದಿಯಲ್ಲಿ 3.70 ಎಂಎಲ್‌ಡಿ ಸಾಮರ್ಥ್ಯದ ಮಲಿನ ನೀರಿನ ಶುದ್ಧೀಕರಣ ಘಟಕ ಆರಂಭಿಸಲಾಯಿತು. ಪರಂಗಿಚಿಕ್ಕನ ‍ಪಾಳ್ಯದ ಬಳಿ ಇರುವ ಚಾರಿತ್ರಿಕ ಭಾರ್ಗಾವತಿ ಕೆರೆಯ ಅಂಚಿನಲ್ಲಿ ಕಲುಷಿತ ಜಲ ಶುದ್ಧೀಕರಣಗೊಳಿಸುವ ವೆಟ್‌ವೆಲ್‌ ಪಂಪ್‌ ಹೌಸ್‌ ಆರಂಭಿಸಲಾಯಿತು.

ಬಹುಕೋಟಿ ವೆಚ್ಚದಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಕಳಪೆಯಿಂದಾಗಿ ಪಟ್ಟಣದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಒಳಚರಂಡಿಯ ಚೇಂಬರ್‌ ಕಟ್ಟಿ ಕೊಂಡು ದುರ್ಗಂಧ ಬೀರುವುದು ತಪ್ಪಿಲ್ಲ ಎಂದು ಅವರು ಆರೋಪಿಸಿ ದರು.

ಕೆರೆಯ ನೀರಿನಲ್ಲಿ ತೊಳೆದ ಬಟ್ಟೆ ಧರಿಸಿದರೆ ಮೈಮೇಲೆ ಗುಳ್ಳೆಗಳು ಏಳುತ್ತಿವೆ. ಜೊತೆಗೆ ಚರ್ಮರೋಗ ಬರುತ್ತಿದೆ. ಇಲ್ಲಿನ ನೀರು ಕುಡಿದ ಪ್ರಾಣಿ ಪಕ್ಷಿಗಳಿಗೆ ರೋಗ ಬಂದು ಮೃತಪಟ್ಟಿವೆ ಎಂದು ಅವರು ದೂರಿದರು.

ಕಲುಷಿತ ನೀರನ್ನು ಶುದ್ಧೀಕರಣ ಘಟಕಕ್ಕೆ ಹರಿಸುವ ಬದಲು ಕೆರೆಗೆ ಹರಿಸಿರುವ ಒಳಚರಂಡಿ ಮಂಡಳಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.