ಬೆಂಗಳೂರು: ಮಡಿವಾಳ ಕೆರೆ ಆವರಣದಲ್ಲಿ ಶನಿವಾರ ನಡೆದ ‘ಕೆರೆ ಹಬ್ಬ’ದಲ್ಲಿ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಸುಮಾರು 500 ನಾಗರಿಕರು ರ್‌್ಯಾಲಿ ನಡೆಸಿದರು.
‘ನಮ್ಮ ಬೆಂಗಳೂರು ಪ್ರತಿಷ್ಠಾನ’, ‘ಬೆಟರ್ ಬೆಂಗಳೂರು 76’ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ದಿನವೀಡಿ ನಡೆದ ಹಬ್ಬದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪಕ್ಷಿ ವೀಕ್ಷಣೆ, ಸೈಕ್ಲಿಂಗ್, ಯೋಗ, ಚಿತ್ರಕಲೆ, ಸಮುದಾಯ ನೃತ್ಯ, ಕಥೆ ಹೇಳುವಿಕೆ, ಛಾಯಾಚಿತ್ರ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು. ಮಕ್ಕಳಿಗಾಗಿ ಮೋಜಿನ ಆಟಗಳನ್ನು ಏರ್ಪಡಿಸಲಾಗಿತ್ತು.
‘ಒನ್ ಬೆಂಗಳೂರು ಫಾರ್ ಲೇಕ್ಸ್’ ಸಂಸ್ಥೆಯ ಅರವಿಂದ ಗುಪ್ತಾ ಮಾತನಾಡಿ, ‘ವಲಸೆ ಹಕ್ಕಿಗಳ ತಾಣವಾದ ಇಂತಹ ಕೆರೆ ನಮ್ಮ ನೆರೆಹೊರೆಯಲ್ಲಿರುವುದು ನಮ್ಮ ಅದೃಷ್ಟ. ಈ ಕೆರೆ ಮತ್ತು ಇದರಲ್ಲಿ ಜೀವವೈವಿಧ್ಯವನ್ನು ರಕ್ಷಿಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ’ ಎಂದು ಹೇಳಿದರು.
ಮಡಿವಾಳ ಕೆರೆ ಪ್ರತಿಷ್ಠಾನದ ಸದಸ್ಯ ಎ.ವಿದ್ಯಾಶಂಕರ್ ಮಾತನಾಡಿ, ‘ಕಳೆದ ವರ್ಷದ ಹಬ್ಬಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ವಲಸೆ ಹಕ್ಕಿಗಳ ತಾಣವಾದ ಈ ಕೆರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.