ADVERTISEMENT

ಕೆರೆ ಒತ್ತುವರಿ; ಸಂಚಾರಕ್ಕೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST
ಕೆರೆ ಒತ್ತುವರಿ; ಸಂಚಾರಕ್ಕೆ ಕಿರಿಕಿರಿ
ಕೆರೆ ಒತ್ತುವರಿ; ಸಂಚಾರಕ್ಕೆ ಕಿರಿಕಿರಿ   

ಮಹದೇವಪುರ: ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ಕೈಕೊಂಡರಹಳ್ಳಿ ಗ್ರಾಮದ ಕೆರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅರಣ್ಯ ಇಲಾಖೆ ಈ ಹಿಂದೆ ಅಳವಡಿಸಿದ್ದ ತಂತಿ ಬೇಲಿಯನ್ನು ಕಿತ್ತು ಹಾಕಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಅಲ್ಲದೆ ಕೆರೆಗೆ ಹೊಂದಿಕೊಂಡಿರುವ ಬೆಂಗಳೂರು-ಸರ್ಜಾಪುರ ಮುಖ್ಯ ರಸ್ತೆಯ ಪಕ್ಕದ ಜಾಗವನ್ನೂ ಕೆರೆಗೆ ಸೇರಿಸಿಕೊಳ್ಳಲಾಗಿದೆ. ಇದರಿಂದಾಗಿ ರಸ್ತೆಯ ಅಗಲ ಇನ್ನಷ್ಟು ಕಿರಿದಾಗಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ.

ಅದರಲ್ಲೂ ಸಂಜೆ ವೇಳೆ ಸಾಕಷ್ಟು ವಾಹನ ದಟ್ಟಣೆ ಆಗುತ್ತಿದೆ. ಆದ್ದರಿಂದಲೇ ರಸ್ತೆ ಪಕ್ಕದಲ್ಲಿನ ನಾಲ್ಕು ಅಡಿಗಳಷ್ಟು ಖಾಲಿ ಜಾಗವನ್ನು ರಸ್ತೆಗೇ ಮೀಸಲಿಡಬೇಕು ಎಂದು ಕೈಕೊಂಡರಹಳ್ಳಿ ಗ್ರಾಮದ ನಾಗರಿಕ ವೇದಿಕೆ ಆಗ್ರಹಿಸಿದೆ.

ರಸ್ತೆಯ ಅಭಿವೃದ್ಧಿ ದೃಷ್ಟಿಯಿಂದ ಕೆರೆಗೆ ಹೊಂದಿಕೊಂಡಿರುವ ಖಾಲಿ ಪ್ರದೇಶವನ್ನು, ಅಂದರೆ ಕೇವಲ ನಾಲ್ಕು ಅಡಿಗಳಷ್ಟು ಭೂಮಿಯನ್ನು ಬಿಬಿಎಂಪಿ ಬಿಟ್ಟುಕೊಡಬೇಕು ಎಂದು ವಾರ್ಡ್ ಸದಸ್ಯ ಬಾಬು ರೆಡ್ಡಿ ಒತ್ತಾಯಿಸಿದ್ದಾರೆ.

ಆದರೆ ಕೆರೆಯ ಪಕ್ಕದಲ್ಲಿನ ಅರ್ಪಾಟ್‌ಮೆಂಟ್‌ಗಳಲ್ಲಿ ವಾಸಿಸುವ ಕೆಲ `ಪರಿಸರವಾದಿ~ಗಳು ಕೆರೆಯನ್ನು ಉಳಿಸುವ ನೆಪದಲ್ಲಿ ಕೆರೆಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದಾರೆ. ಆದ್ದರಿಂದ ಗ್ರಾಮದ ಜನತೆಗೆ ಕೆರೆಯ ಸುತ್ತ ಸಂಚರಿಸಲು ಅವರು ಅವಕಾಶ ನೀಡುತ್ತಿಲ್ಲ ಎಂದು ವೇದಿಕೆ ದೂರಿದೆ.

ಕೆರೆಯ ಅಕ್ಕಪಕ್ಕದಲ್ಲಿನ ಬಹುಮಹಡಿ ಕಟ್ಟಡಗಳಿಂದ ನಿತ್ಯವೂ ತ್ಯಾಜ್ಯ ನೀರು ಚರಂಡಿಯ ಮೂಲಕ ಹರಿದು ಬಂದು ಕೆರೆಯನ್ನು ಸೇರುತ್ತಿದೆ. ಈ ಬಗ್ಗೆ ಬಿಬಿಎಂಪಿ ಆರೋಗ್ಯ ಇಲಾಖೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ.

ಇನ್ನೂ ಕೆರೆಯ ಕೆಲ ಭಾಗವನ್ನು ಖಾಸಗಿ ಶಾಲೆಗೆ ಆಟದ ಮೈದಾನಕ್ಕೆ ಬಿಟ್ಟು ಕೊಡಲಾಗಿದೆ. ಹೊಸದಾಗಿ ಕೆರೆಯ ಸುತ್ತಳತೆಯನ್ನು ಮಾಡಬೇಕು. ಒತ್ತುವರಿಯಾದ ಕೆರೆಯ ಜಾಗವನ್ನು ತೆರವುಗೊಳಿಸಬೇಕು. ಖಾಸಗಿ ಕಟ್ಟಡಗಳಿಂದ ಕೆರೆಗೆ ಹರಿದು ಬರುವ ಕೊಳಚೆ ನೀರನ್ನು ತಡೆಗಟ್ಟಬೇಕು ಎಂದು ವೇದಿಕೆ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.