ADVERTISEMENT

ಕೇಂದ್ರ ಸಚಿವ ದೇಶ್‌ಮುಖ್‌ರಿಂದ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 19:10 IST
Last Updated 3 ಫೆಬ್ರುವರಿ 2011, 19:10 IST

ಬೆಂಗಳೂರು: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ವಿಲಾಸರಾವ್ ದೇಶಮುಖ್ ಅವರಿಂದ ತಮಗೆ ಜೀವ ಬೆದರಿಕೆ ಇರುವುದಾಗಿ ಆರೋಪಿಸಿರುವ ಕರೀಂ ಲಾಲಾ ತೆಲಗಿ, ತಮ್ಮನ್ನು ಪುಣೆಯ ಯರವಾಡ ಜೈಲಿಗೆ ಸ್ಥಳಾಂತರಿಸದಂತೆ ಆದೇಶಿಸಲು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾನೆ.

ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ತೆಲಗಿಗೆ ವಾರೆಂಟ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರುವ ತೆಲಗಿಗೆ ಯರವಾಡ ಜೈಲಿಗೆ ಸ್ಥಳಾಂತರಿಸುವಂತೆ ಮುಂಬೈ ಹೈಕೋರ್ಟ್ ಆದೇಶಿಸಿದೆ. ಇದನ್ನು ಆತ ಇಲ್ಲಿ ಪ್ರಶ್ನಿಸಿದ್ದಾನೆ.ಮುಂಬೈನ ನಿವೃತ್ತ ಡಿಜಿಪಿ ಎಸ್.ಎಸ್.ಪುರಿ, ಅಲ್ಲಿಯ ಜಿಲ್ಲಾಧಿಕಾರಿ ರಾಧೇಶ್ಯಾಮ್ ಇತರರಿಂದ ತನಗೆ ಜೀವಬೆದರಿಕೆ ಇದೆ ಎಂದಿರುವ ತೆಲಗಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರ್ಜಿಯಲ್ಲಿ ತಿಳಿಸಿಲ್ಲ.

ಇದಲ್ಲದೇ, ‘ನನಗೆ ಹಾಗೂ ಪತ್ನಿಗೆ ಕಿಡ್ನಿ ವೈಫಲ್ಯ, ಬಿ.ಪಿ, ಮಧುಮೇಹ, ಏಡ್ಸ್ ಮುಂತಾದ ಕಾಯಿಲೆಗಳು ಇವೆ. ನಾನು ಪುಣೆಗೆ ಹೋದರೆ ನನ್ನ ಪತ್ನಿಯ ಜೊತೆ ಅನುಭವ ಹಂಚಿಕೊಳ್ಳಲು ಆಗುವುದಿಲ್ಲ. ಪುಣೆಯ ವಾತಾವರಣ ಹಾಗೂ ಆಹಾರ ನನಗೆ ಸರಿ ಹೋಗುವುದಿಲ್ಲ. ನನಗೆ ‘ಝಡ್ ಪ್ಲಸ್’ ಭದ್ರತೆ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಆಗುತ್ತದೆ. ಈ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನನಗೆ ಅನುಮತಿ ಕೊಡಿ’ ಎಂದು ತೆಲಗಿ ಅರ್ಜಿಯಲ್ಲಿ ಕೋರಿದ್ದಾನೆ.ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೆಚ್ಚಿನ ಮಾಹಿತಿ ಬಯಸಿರುವ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.