ADVERTISEMENT

ಕೇಬಲ್‌ ದರ ಹೆಚ್ಚಳ ಆಪರೇಟರ್‌ಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:19 IST
Last Updated 14 ಡಿಸೆಂಬರ್ 2017, 19:19 IST
ಕೇಬಲ್‌ ದರ ಹೆಚ್ಚಳ ಆಪರೇಟರ್‌ಗಳ ನಿರ್ಧಾರ
ಕೇಬಲ್‌ ದರ ಹೆಚ್ಚಳ ಆಪರೇಟರ್‌ಗಳ ನಿರ್ಧಾರ   

ಬೆಂಗಳೂರು: ಜಿಎಸ್‌ಟಿ ಹಾಗೂ ವಾರ್ಷಿಕ ಏರಿಕೆ ನೆಪವೊಡ್ಡಿ ಕೇಬಲ್‌ ಆಪರೇಟರ್‌ಗಳು ನಗರದಲ್ಲಿ ಕೇಬಲ್‌ ದರ ಹೆಚ್ಚಿಸಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಕಡೆ ದರ ಏರಿಕೆ ಮಾಡಲಾಗಿದೆ. ಹಲವು ಆಪರೇಟರ್‌ಗಳು 2018ರ ಜನವರಿಯಿಂದ ಹೆಚ್ಚಿಸಲು ತೀರ್ಮಾನಿಸಿದ್ದಾರೆ.

ಇಂದಿರಾನಗರ, ಕೋರಮಂಗಲದಲ್ಲಿ ಸ್ಥಳೀಯ ಕೇಬಲ್‌ ಆಪರೇಟರ್‌ಗಳು ಈಗಾಗಲೇ ದರ ಏರಿಕೆ ಮಾಡಿದ್ದಾರೆ. ಇಲ್ಲಿ ತಿಂಗಳಿಗೆ ₹350 ರಿಂದ ₹400 ಸಂಗ್ರಹ ಮಾಡಲಾಗುತ್ತಿದೆ. ಜನವರಿಯಿಂದ ದರ ಏರಿಸುವುದಾಗಿ ಮಹಾಲಕ್ಷ್ಮಿ ಬಡಾವಣೆ, ಪದ್ಮನಾಭನಗರ, ರಾಜಾಜಿನಗರ, ಶ್ರೀನಗರ ಆ‍ಪರೇಟರ್‌ಗಳು ತಿಳಿಸಿದ್ದಾರೆ.

ಕೆಳ ಮಧ್ಯಮ ವರ್ಗದವರು ಹೆಚ್ಚಿರುವ ಪ್ರದೇಶಗಳಲ್ಲಿ, ಕೇಬಲ್‌ ದರ ಏರಿಕೆ ಮಾಡಿದರೆ ಇರುವ ಗ್ರಾಹಕರೂ ಕೈತಪ್ಪಿ ಡಿಟಿಎಚ್‌ಗೆ ಹೋಗಬಹುದು ಎಂಬ ಭಯದಿಂದ ಕೆಲವು ಆಪರೇಟರ್‌ಗಳು ದರ ಏರಿಕೆ ಮಾಡಿಲ್ಲ.

ADVERTISEMENT

‘₹250ರ ಪ್ಯಾಕೇಜ್‌ ಹಾಕಿಸಿಕೊಂಡಿದ್ದೇವೆ. 2018ರ ಜನವರಿಯಿಂದ ₹300 ನೀಡುವಂತೆ ಆಪರೇಟರ್‌ ಹೇಳಿದ್ದಾರೆ. ಒಮ್ಮೆಗೆ ₹50 ಹೆಚ್ಚಿಸುವುದು ಸರಿಯಲ್ಲ’ ಎಂದು ಮಹಾಲಕ್ಷ್ಮಿ ಬಡಾವಣೆಯ ಜೆ.ಸಿ.ನಗರದ ಸುಧೀಂದ್ರ ರಾವ್‌ ದೂರಿದರು.

‘ನಾವು ಸದ್ಯ ₹300 ನೀಡುತ್ತಿದ್ದೇವೆ. ಮುಂದಿನ ತಿಂಗಳಿನಿಂದ ₹350 ಪಾವತಿಸಬೇಕು ಎಂದು ಆಪರೇಟರ್‌ ಹೇಳಿದ್ದಾರೆ’ ಎಂದು ಪದ್ಮನಾಭನಗರದ ನಿವಾಸಿ ಕೆ. ಪೆನ್ನಾವತಿ ತಿಳಿಸಿದರು.

‘ನಮ್ಮ ಮನೆಯಲ್ಲಿ ₹350ರ ಪ್ಯಾಕೇಜ್‌ ಹಾಕಿಸಿಕೊಂಡಿದ್ದೇವೆ. ಜನವರಿಯಲ್ಲಿ ₹370 ನೀಡಬೇಕೆಂದು ಕೇಬಲ್‌ ಆಪರೇಟರ್‌ ಸೂಚಿಸಿದ್ದಾರೆ’ ಎಂದು ಶ್ರೀನಗರ ನಿವಾಸಿ ಕೀರ್ತಿ ಉಪೇಂದ್ರ ಹೇಳಿದರು.

ಕರ್ನಾಟಕ ಕೇಬಲ್ ಟಿ.ವಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು, ‘ಚಾನಲ್‌ಗಳ ದರ ಏರಿಕೆ ಆಗುವುದರಿಂದ ಪ್ರತಿ ವರ್ಷ ದರ ಏರಿಸುವುದು ಸಾಮಾನ್ಯ. ಕೆಲವು ಕಡೆ ಜಿಎಸ್‌ಟಿ ಜಾರಿಯಾದಾಗ ಹೆಚ್ಚು ಮಾಡಿದ್ದರು. ಪ್ರತಿ ವರ್ಷ ಏರಿಕೆ ಮಾಡುವ ದರ ₹20ರ ಒಳಗೆ ಇರುತ್ತದೆ’ ಎಂದರು.

‘ಕೇಬಲ್‌ ಅನ್ನು ನಿರ್ವಹಿಸುವುದೇ ಕಷ್ಟವಾಗಿದೆ. ಹಲವು ವರ್ಷದಿಂದ ಮಾಡುತ್ತಿರುವ ಈ ವ್ಯವಹಾರವನ್ನು ನಿಲ್ಲಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಕೇಬಲ್‌ ಆಪರೇಟರ್‌ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.