ADVERTISEMENT

‘ಕೈಗಾರಿಕಾ ನೀತಿ ತಿದ್ದುಪಡಿ ಮಾಡಿ’

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 20:05 IST
Last Updated 13 ಜೂನ್ 2017, 20:05 IST
ಎಚ್‌.ಎಸ್‌.ದೊರೆಸ್ವಾಮಿ ಅವರನ್ನು ಬಂಜಗೆರೆ ಜಯಪ್ರಕಾಶ್‌ (ಬಲತುದಿ) ಸನ್ಮಾನಿಸಿದರು. ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಎಚ್‌.ಎಸ್‌.ದೊರೆಸ್ವಾಮಿ ಅವರನ್ನು ಬಂಜಗೆರೆ ಜಯಪ್ರಕಾಶ್‌ (ಬಲತುದಿ) ಸನ್ಮಾನಿಸಿದರು. ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಉದ್ಯಮ ಮತ್ತು ಕೈಗಾರಿಕೆಗಳಲ್ಲಿ ಶೇ 51 ರಷ್ಟು ಉದ್ಯೋಗಗಳನ್ನು ಸ್ಥಳೀಯರು ಪಡೆಯುವಂತಾಗಲು ಕೈಗಾರಿಕಾ ನೀತಿಗೆ ತಿದ್ದುಪಡಿ ಮಾಡಬೇಕು’ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಒತ್ತಾಯಿಸಿದರು.

ಸ್ವಾಭಿಮಾನಿ ಕರ್ನಾಟಕ ವೇದಿಕೆಯು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕುರಿತ ಚಿಂತನಾ ಗೋಷ್ಠಿ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಜೆಟ್‌ನ ಮೊತ್ತದಷ್ಟು ತೆರಿಗೆ ವಿನಾಯಿತಿ ನೀಡುತ್ತಿದೆ. ಆದರೆ, ಆ ಕಂಪೆನಿಗಳು ಕನ್ನಡಿಗರಿಗೆ ಹೆಚ್ಚು ಉದ್ಯೋಗ ನೀಡುತ್ತಿಲ್ಲ. ಬೇರೆ ರಾಜ್ಯದ ಅಥವಾ ವಿದೇಶದ ವ್ಯಕ್ತಿಯೊಬ್ಬ ರಾಜ್ಯದಲ್ಲಿ ಉದ್ಯಮ ಅಥವಾ ಕೈಗಾರಿಕೆ ಸ್ಥಾಪಿಸಲು ಕನ್ನಡಿಗರೊಬ್ಬರನ್ನು ಕಡ್ಡಾಯವಾಗಿ ಪಾಲುದಾರರನ್ನಾಗಿ ಹೊಂದಬೇಕೆಂಬ ನಿಯಮ ರೂಪಿಸಬೇಕು. ಕನ್ನಡ ಬರುವವರಿಗೆ ಮಾತ್ರ ವ್ಯಾಪಾರದ ಪರವಾನಗಿ ನೀಡಬೇಕು’ ಎಂದರು.

ADVERTISEMENT

ಎಚ್‌.ಎಸ್‌. ದೊರೆಸ್ವಾಮಿ, ‘ರಾಜ್ಯದ ಎಲ್ಲ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ನಿರ್ದಿಷ್ಟ ಕೆಲಸ ಮಾಡುವ ಜ್ಞಾನ ಮತ್ತು ಕೌಶಲ ಇರುವ ಜನರು ರಾಜ್ಯದಲ್ಲಿ ಇಲ್ಲದಿದ್ದಾಗ ಮಾತ್ರ ಹೊರರಾಜ್ಯದಿಂದ ಕೆಲಸಗಾರರನ್ನು ಕರೆಸಿಕೊಳ್ಳಲಿ. ಪ್ರತಿ ರಾಜ್ಯದಲ್ಲಿ ಆಯಾ ರಾಜ್ಯದ ಜನರನ್ನೇ ಕೆಲಸಕ್ಕೆ ನಿಯೋಜಿಸಿಕೊಳ್ಳಲಿ. ಆಗ ನಿರುದ್ಯೋಗದ ಸಮಸ್ಯೆ ಬರದು’ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌, ‘ಸರೋಜಿನಿ ಮಹಿಷಿ ವರದಿಯು ದೇಶದ ಏಕತೆ ಕಾಪಾಡುವ ಅಂಶಗಳನ್ನು ಒಳಗೊಂಡಿದೆ ಎಂದು ರಾಷ್ಟ್ರೀಯ ಐಕ್ಯತಾ ಪರಿಷತ್ತು ಒಪ್ಪಿಕೊಂಡಿದೆ’ ಎಂದರು.

‘ಕಾರ್ಪೊರೇಟ್‌ ಕಂಪೆನಿಗಳು ಸಾಮಾಜಿಕ ಹೊಣೆಗಾರಿಕೆಯಲ್ಲಿ ಶೇ 2 ರಷ್ಟು ಲಾಭಾಂಶ ನೀಡುವ ಬದಲು, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸಲಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.