ADVERTISEMENT

ಕೈದಿಗಳ ಮೇಲೆ ಹಲ್ಲೆ: ವಿಚಾರಣೆಗೆ ಹಾಜರಾಗುವಂತೆ ಜೈಲು ಅಧೀಕ್ಷಕರಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 20:15 IST
Last Updated 7 ಅಕ್ಟೋಬರ್ 2017, 20:15 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ವರದಿ ನೀಡಿದ್ದ ಅಂದಿನ ಡಿಐಪಿ ಡಿ.ರೂಪಾ ಅವರ ಪರ ಪ್ರತಿಭಟನೆ ನಡೆಸಿದ್ದ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋ‍ದಡಿ ಜೈಲು ಅಧೀಕ್ಷಕ ಕೃಷ್ಣಕುಮಾರ್‌ ಅವರಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗವು ನೋಟಿಸ್‌ ನೀಡಿದೆ.

ಜುಲೈ 15ರಂದು ರಾತ್ರಿ ಕಾರಾಗೃಹದಲ್ಲಿ  20 ಕೈದಿಗಳ ಮೇಲೆ ಹಲ್ಲೆ ನಡೆಸಿದ್ದ ಬಳಿಕ, ಅವರನ್ನು  ಕಲಬುರ್ಗಿ, ಬೆಳಗಾವಿ, ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಸ್ಥಳಾಂತರ ವೇಳೆಯಲ್ಲೂ ಹಲವರು ಕುಂಟುತ್ತ, ನರಳುತ್ತ ವಾಹನ ಹತ್ತಿದ್ದರು. ಈ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಅದಾದ ನಂತರ ಜೈಲಿಗೆ ಭೇಟಿ ನೀಡಿದ್ದ ಆಯೋಗದ ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವದ ತಂಡ, ಹಲವರನ್ನು ವಿಚಾರಣೆಗೆ ಒಳಪಡಿಸಿ 72 ಪುಟಗಳ ವರದಿಯೊಂದನ್ನು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಅವರಿಗೆ ನೀಡಿದೆ. ಅದರನ್ವಯ ಆಯೋಗವು ವಿಚಾರಣೆ ಕೈಗೆತ್ತಿಕೊಂಡಿದೆ. ಅ.23ರಂದು ನಡೆಯುವ ವಿಚಾರಣೆಗೆ ಬರುವಂತೆ ಕೃಷ್ಣಕುಮಾರ್‌ ಅವರಿಗೆ ನೋಟಿಸ್‌ ಮೂಲಕ ಸೂಚನೆ ನೀಡಿದೆ.

ADVERTISEMENT

ಹಲ್ಲೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ: ಕೈದಿಗಳ ಮೇಲೆ ನಡೆಸಿದ್ದ ಹಲ್ಲೆಯ ದೃಶ್ಯಗಳು ಕಾರಾಗೃಹದಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಅವುಗಳ ಡಿವಿಆರ್‌ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದ ಐಜಿಪಿ ಮುಖರ್ಜಿ, ಆ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.