ADVERTISEMENT

ಕೊಕ್ಕರೆ ಹಿಡಿಯಲು ಹೋಗಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಕೊಕ್ಕರೆ ಹಿಡಿಯಲು ಹೋಗಿ ಯುವಕ ಸಾವು
ಕೊಕ್ಕರೆ ಹಿಡಿಯಲು ಹೋಗಿ ಯುವಕ ಸಾವು   

ಬೆಂಗಳೂರು: ಮಂಗಮ್ಮನಪಾಳ್ಯದ ಕೆರೆಯಲ್ಲಿ ಕೊಕ್ಕರೆ ಹಿಡಿಯಲು ಹೋಗಿದ್ದ ಸಲ್ಮಾನ್ (19) ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳೀಯ ನಿವಾಸಿಯಾದ ಸಲ್ಮಾನ್‌, ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ತನ್ನ ಇಬ್ಬರು ಸ್ನೇಹಿತರ ಜತೆಯಲ್ಲಿ ಈಜಲು ಭಾನುವಾರ ಬೆಳಿಗ್ಗೆ ಕೆರೆಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಬಂಡೇಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಮೂವರೂ ನೀರಿಗೆ ಇಳಿದಿದ್ದರು. ಅದೇ ವೇಳೆ ನೀರಿನಲ್ಲಿ ಆಟವಾಡುತ್ತಿದ್ದ ಕೊಕ್ಕರೆಯನ್ನು ನೋಡಿದ್ದ ಸಲ್ಮಾನ್, ಅದನ್ನು ಹಿಡಿಯಲು ಮುಂದಾಗಿದ್ದರು. ಕೊಕ್ಕರೆಯು ತಪ್ಪಿಸಿಕೊಂಡು ಓಡಲಾರಂಭಿಸಿತ್ತು. ಅದನ್ನು ಹಿಂಬಾಲಿಸಿಕೊಂಡು ಹೊರಟಿದ್ದಾಗಲೇ ನೀರಿನಲ್ಲಿ ಮುಳುಗಿದ್ದರು. ಅವರು ಕಾಣಿಸದಿದ್ದರಿಂದ ಗಾಬರಿಗೊಂಡ ಸ್ನೇಹಿತರು, ಹುಡುಕಾಟ ನಡೆಸಿದ್ದರೂ ಪತ್ತೆ ಆಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಸ್ನೇಹಿತರೇ ಸಹಾಯಕ್ಕಾಗಿ ಕೂಗಾಡಿ ಸ್ಥಳೀಯರನ್ನು ಸೇರಿಸಿದ್ದರು. ಅವರಿಂದಲೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ನಂತರ, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಬೆಳಿಗ್ಗೆವರೆಗೂ ಕಾರ್ಯಾಚರಣೆ ನಡೆಸಿ ಸಲ್ಮಾನ್‌ ಶವವನ್ನು ಹೊರಗೆ ತೆಗೆದರು. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದೇವೆ. ಘಟನೆ ನಂತರ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.