ADVERTISEMENT

ಕೊಲೆ: ಏಳು ಮಂದಿ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ಬೆಂಗಳೂರು:  ಕಳೆದ ತಿಂಗಳು ನಡೆದಿದ್ದ ನಾಗೇಂದ್ರಗುಪ್ತ ಎಂಬುವರ ಕೊಲೆ ಪ್ರಕರಣವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ, ಹತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಮೂರ್ತಿ (31), ದಿನೇಶ್‌ಕುಮಾರ್ (29), ಜೀವ (27), ಹೇಮಂತ್ (26), ಶಂಕರ (35), ನಾಗರಾಜ (37) ಮತ್ತು ತಮಿಳುನಾಡಿನ ಶ್ರೀನಿವಾಸ (27) ಬಂಧಿತರು.

ಆಯುರ್ವೇದ ವೈದ್ಯರಾಗಿದ್ದ ನಾಗೇಂದ್ರ ಗುಪ್ತ ಅವರು ಗಿರಿನಗರದಲ್ಲಿ ವಾಸವಾಗಿದ್ದರು. ಕೆಲ ತಿಂಗಳಿಂದ ಅವರು ನಗರದ ಮೆಜೆಸ್ಟಿಕ್, ಶಿವಾಜಿನಗರ ಮುಂತಾದ ಕಡೆ ರೈಸ್‌ಪುಲ್ಲಿಂಗ್ ದಂಧೆಯಲ್ಲಿ ತೊಡಗಿದ್ದರು. ಆಗ ಅವರಿಗೆ ಆರೋಪಿ ಶ್ರೀನಿವಾಸ ಮತ್ತು ಶಂಕರ ಅವರ ಪರಿಚಯವಾಗಿತ್ತು.

ನಾಗೇಂದ್ರಗುಪ್ತ ಅವರು ರೈಸ್‌ಪುಲ್ಲಿಂಗ್‌ನಿಂದ ಸಂಪಾದಿಸಿದ ಹಣವನ್ನು ಮನೆಯಲ್ಲಿ ಹೂತಿಟ್ಟಿದ್ದಾರೆ ಎಂದು ಭಾವಿಸಿದ್ದ ಶಂಕರ, ಅವರನ್ನು ಕೊಲೆ ಮಾಡಿ ಆ ಹಣವನ್ನು ದೋಚಲು ಸಂಚು ರೂಪಿಸಿದ್ದ. ಅದಕ್ಕಾಗಿ ಸ್ನೇಹಿತರ ನೆರವು ಕೇಳಿದ ಆತ, ಬಂದ ಹಣವನ್ನು ಸಮನಾಗಿ ಹಂಚುವುದಾಗಿ ಹೇಳಿದ್ದ. ಸ್ನೇಹಿತನ ಮನೆಗೆ ಹೋಗಿ ಬರೋಣ ಎಂಬ ನೆಪದಲ್ಲಿ ಮೇ 18 ರಂದು ಶಂಕರ ಮತ್ತು ಶ್ರೀನಿವಾಸ, ನಾಗೇಂದ್ರಗುಪ್ತ ಅವರನ್ನು ಮನೆಯಿಂದ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಮಾರ್ಗ ಮಧ್ಯೆ ಉಳಿದ ಆರೋಪಿಗಳನ್ನು ಕಾರಿನಲ್ಲಿ ಹತ್ತಿಸಿಕೊಂಡು ನಾಗೇಂದ್ರಗುಪ್ತ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಂತರ ಹೊಸಕೋಟೆ ರಸ್ತೆಯ ನಿರ್ಜನ ಪ್ರದೇಶದಲ್ಲಿ ಶವವನ್ನು ಬೇರೆ ಕಾರಿಗೆ ಸ್ಥಳಾಂತರಿಸಿ, ಮುಳಬಾಗಿಲು ಸಮೀಪದ ಕಾಮನೂರು ಬಳಿ ಶವ ಎಸೆದು ನಗರಕ್ಕೆ ವಾಪಸ್ ಬಂದಿದ್ದರು. ಮುಳಬಾಗಿಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಆರ್.ಪುರದ ಚಿನ್ನಾಭರಣ ಅಂಗಡಿಯೊಂದರ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮೂರ್ತಿಯನ್ನು ಜೂ 9 ರಂದು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಯಿತು.

ಈ ವೇಳೆ ಕೊಲೆ ಪ್ರಕರಣದ ಬಗ್ಗೆಯೂ ಸುಳಿವು ನೀಡಿದ. ಆ ಮಾಹಿತಿಯಿಂದ ಉಳಿದ ಆರೋಪಿಗಳನ್ನು ಬಂಧಿಸಲಾಯಿತು. ಮತ್ತೊಬ್ಬ ಆರೋಪಿ ಶ್ರೀನಿವಾಸ  ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
 

ಏನಿದು ರೈಸ್‌ಪುಲ್ಲಿಂಗ್?
ತಾಮ್ರ, ಹಿತ್ತಾಳೆ ಅಥವಾ ಪಂಚಲೋಹದ ತಟ್ಟೆಯಲ್ಲಿ ಅಕ್ಕಿ ಕಾಳುಗಳನ್ನು ಹಾಕಿ, ಅದೇ ಲೋಹದ ಚೊಂಬಿನಿಂದ ಅಕ್ಕಿ ಕಾಳುಗಳನ್ನು ಆಕರ್ಷಿಸಿ ನಂತರ ತಟ್ಟೆ ಮತ್ತು ಚೊಂಬನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವ ತಂತ್ರ.   ಈ ತಟ್ಟೆ ಮತ್ತು ಚೊಂಬು ಮನೆಯಲ್ಲಿದ್ದರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ವಂಚಿಸಲಾಗುತ್ತದೆ. ಚಾಮರಾಜನಗರ, ಕೋಲಾರ, ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗಗಳಲ್ಲಿ ಈ ದಂಧೆ ರೂಢಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT