ADVERTISEMENT

ಕೊಳಚೆ ನೀರು: ಖಾಸಗಿ ಸಂಸ್ಕರಣಾ ಘಟಕ ನಿರ್ವಹಣೆಗೆ ನಿಯಮ ರಚನೆ

ಜಲಮಂಡಳಿ, ಕೆಎಸ್‌ಪಿಸಿಬಿಗೆ ಹೊಣೆ ವಹಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2018, 19:36 IST
Last Updated 23 ಫೆಬ್ರುವರಿ 2018, 19:36 IST

ಬೆಂಗಳೂರು: ನಗರದಲ್ಲಿ ಖಾಸಗಿ ಮಾಲೀಕತ್ವದಲ್ಲಿರುವ ಕೊಳಚೆ ನೀರು ಸಂಸ್ಕರಣೆ ಘಟಕಗಳ (ಎಸ್‌ಟಿಪಿ) ಕಾರ್ಯಾಚರಣೆ, ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿ ಮಾರ್ಗಸೂಚಿ ಸಿದ್ಧಪಡಿಸುವಂತೆ ಜಲಮಂಡಳಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.

ಈ ಕುರಿತು  ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಶುಕ್ರವಾರ ಸಭೆ ನಡೆಸಿದರು.

ಖಾಸಗಿ ಎಸ್‌ಟಿಪಿ ಘಟಕಗಳ ನಿರ್ವಹಣೆ ಮಾಡುವವರನ್ನು ಗುರುತಿಸಿ ತರಬೇತಿ ನೀಡುವ ಹೊಣೆಯನ್ನೂ ಜಲಮಂಡಳಿ ಹಾಗೂ ಕೆಎಸ್‌ಪಿಸಿಬಿಗೆ ವಹಿಸಲಾಗಿದೆ.

ADVERTISEMENT

ಕೊಳಚೆ ನೀರು ಸಂಸ್ಕರಣೆ ಘಟಕಗಳ ತ್ಯಾಜ್ಯಗುಂಡಿ ಸ್ವಚ್ಛತೆಗೆ ಅಥವಾ ನಿರ್ವಹಣೆಗೆ ಬಳಸುವ ಕಾರ್ಮಿಕರ ಸುರಕ್ಷತೆ ಕುರಿತು ಮುನ್ನೆಚ್ಚರಿಕೆ ವಹಿಸದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ದಂಡ ವಿಧಿಸುವ ಕುರಿತು ಮಾರ್ಗಸೂಚಿ ರಚಿಸಲಿವೆ ಎಂದು ಅವರು ತಿಳಿಸಿದರು.

ಒಳಚರಂಡಿ ಹಾಗೂ ತ್ಯಾಜ್ಯಗುಂಡಿಗಳನ್ನು ಶುಚಿಗೊಳಿಸಲು ಕಾರ್ಮಿಕರನ್ನು ಬಳಸುವ ಬದಲು ಜೆಟ್ಟಿಂಗ್‌ ಮತ್ತು ಸಕ್ಕಿಂಗ್‌ ಯಂತ್ರ ಬಳಸುವುದಕ್ಕೆ ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ಈ ಕಾಯಕದಲ್ಲಿ ತೊಡಗಿರುವ ನಿರ್ದಿಷ್ಟ ಸಮುದಾಯದ ವ್ಯಕ್ತಿಗಳು ಇಂತಹ ಯಂತ್ರ ಖರೀದಿಗೆ ಮುಂದಾದರೆ, ಅವರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಲಿದೆ. ಇದಕ್ಕೆ ಕಾರ್ಯಕ್ರಮ ರೂಪಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ.

ಜಲಮಂಡಳಿ, ಕೆಎಸ್‌ಪಿಸಿಬಿ, ಬಿಬಿಎಂಪಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.