ADVERTISEMENT

ಕೋಟಿ ಚೆನ್ನಯ ಹೆಸರಲ್ಲಿ ಥೀಮ್‌ಪಾರ್ಕ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 19:20 IST
Last Updated 20 ಫೆಬ್ರುವರಿ 2011, 19:20 IST

ಬೆಂಗಳೂರು: ‘ತುಳುನಾಡಿನ ಸಾಂಸ್ಕೃತಿಕ ಪುರುಷರಾದ ಕೋಟಿ ಚೆನ್ನಯರ ಹೆಸರಿನಲ್ಲಿ ರಾಜ್ಯ ಸರ್ಕಾರ ಕಾರ್ಕಳದ ಬಳಿ ಥೀಮ್‌ಪಾರ್ಕ್ ನಿರ್ಮಿಸುತ್ತಿದ್ದು ಇನ್ನು ನಾಲೈದು ತಿಂಗಳಲ್ಲಿ ನಾಡಿಗೆ ಸಮರ್ಪಣೆಯಾಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ ಭಾನುವಾರ ಇಲ್ಲಿ ತಿಳಿಸಿದರು.

 ಬಿಲ್ಲವ ಸಂಘ ಏರ್ಪಡಿಸಿದ್ದ ‘ಮಹಿಳಾ ಸಮಾವೇಶ 2011’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ತುಳುನಾಡಿನ ಶ್ರೀಮಂತ ಪರಂಪರೆಯನ್ನು ಬಿಂಬಿಸುವುದು ಥೀಮ್ ಪಾರ್ಕ್ ನಿರ್ಮಾಣದ ಹಿಂದಿನ ಉದ್ದೇಶವಾಗಿದೆ. 1 ಕೋಟಿ 70 ಲಕ್ಷ ರೂಪಾಯಿ ವೆಚ್ಚದ ಈ ಥೀಮ್ ಪಾರ್ಕ್ ನೂರು ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಕೋಟಿ ಚೆನ್ನಯರ ಜೀವನದ ವಿವರಗಳು ಸಾಧನೆಗಳನ್ನು ಬಿಂಬಿಸುವ ಉದ್ಯಾನ ಇದಾಗಿದೆ’ ಎಂದು ಹೇಳಿದರು.

‘ಸಂತ ನಾರಾಯಣ ಗುರು ಅವರ ಜನ್ಮದಿನದ ನೆನಪಿಗಾಗಿ ಈ ವರ್ಷದಿಂದ ಸರ್ಕಾರ ನಿರ್ಬಂಧಿತ ರಜೆ ಘೋಷಿಸುತ್ತಿದ್ದು ನಾಲ್ಕೈದು ವರ್ಷಗಳಲ್ಲಿ ಇದು ಪೂರ್ಣ ರಜೆಯಾಗಿ ಮಾರ್ಪಡಲಿದೆ’ ಎಂದು ತಿಳಿಸಿದರು.‘ಬಿಲ್ಲವ ಸಮಾಜ ಸರ್ಕಾರ ನೀಡಿರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಆಶಾಭಾವದಿಂದ ಸಮಾಜದ ಪ್ರಗತಿಗೆ ದುಡಿಯಬೇಕಿದೆ. ಸರ್ಕಾರ ಸಮಾಜಕ್ಕೆ ಅಗತ್ಯವಿರುವ ಎಲ್ಲ ಬಗೆಯ ನೆರವು ನೀಡಲು ಸಿದ್ಧವಿದೆ’ ಎಂದು ನುಡಿದರು.

‘ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ರೂ 626 ಕೋಟಿ ಮೀಸಲಿಡಲಾಗಿದೆ. 2005-06ನೇ ಹಣಕಾಸು ವರ್ಷದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗೆ ರೂ 101 ಕೋಟಿ ಮೀಸಲಿಡಲಾಗಿತ್ತು.ಮುಂದಿನ ಆಯವ್ಯಯದಲ್ಲಿ ಮುಖ್ಯಮಂತ್ರಿ  1 ಸಾವಿರ ಕೋಟಿ ಮೀಸಲಿಡಲಿದ್ದಾರೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಂಸ್ಥೆಯ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, ‘ರಾಜ್ಯ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜ ಪ್ರತಿನಿಧಿಗಳು ಇಲ್ಲವಾಗಿದ್ದು ಸಮಾಜದ ಶಾಸಕರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕಿದೆ. ಈ ಮೂಲಕ ಸಮಾಜದ ಕುಂದು ಕೊರತೆಗಳ ಬಗ್ಗೆ ಅಹವಾಲು ತೋಡಿಕೊಳ್ಳಲು ಅವಕಾಶ ಕಲ್ಪಿಸಬೇಕಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರಿನಿವಾಸ್ ಪೂಜಾರಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಮಾತನಾಡಿದರು.

ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಭಾಸ್ಕರ್ ಸಿ ಅಮಿನ್, ಉಪಾಧ್ಯಕ್ಷೆ ಕೆ. ಶಾರದಾ ಕೃಷ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಸಹ ಕಾರ್ಯದರ್ಶಿ ಪಿ.ಬಾಲಕೃಷ್ಣ, ಕೋಶಾಧಿಕಾರಿ ಮಾಚ ಬಿಲ್ಲವ, ಸಂಘಟನಾ ಕಾರ್ಯದರ್ಶಿ ಬಿ.ಎಂ. ಉದಯ್ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ   ಎಲ್ ಕೋಟ್ಯನ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.