ADVERTISEMENT

ಕೌನ್ಸಿಲ್‌ ಸಭೆ ಚರ್ಚೆ ಬಳಿಕವಷ್ಟೇ ಜಾರಿ

ನೂತನ ವಾಹನ ನಿಲುಗಡೆ ನೀತಿ: ಮೇಯರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:30 IST
Last Updated 21 ಸೆಪ್ಟೆಂಬರ್ 2013, 19:30 IST

ಬೆಂಗಳೂರು: ‘ರಾಜ್ಯ ಸರ್ಕಾರದ ನಗರ ಭೂ­ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಸಿದ್ಧಪಡಿಸಿರುವ ಕಾರ್ಯ ಯೋಜನೆಯ ಶಿಫಾರಸುಗಳಿಗೆ ಬಿಬಿಎಂಪಿಗೆ ಒಪ್ಪಿಗೆ ನೀಡಿದೆ. ಈ ವಿಷಯ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಗೆ ಬರಲು ಇನ್ನೂ ಮೂರು ತಿಂಗಳು ಬೇಕಾ ಗುತ್ತದೆ’ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹೇಳಿದರು.

ನೂತನ ವಾಹನ ನಿಲುಗಡೆ ನೀತಿ ಕೈಬಿಡಬೇಕೆಂದು ಯುವ ಕಾಂಗ್ರೆಸ್‌ ನಗರ ಘಟಕದ ಸದಸ್ಯರು ಶನಿವಾರ ಸಲ್ಲಿಸಿದ ಮನವಿ ಸ್ವೀಕರಿಸಿ ಮಾತ ನಾಡಿದ ಅವರು, ‘ರಾಜ್ಯ ಸರ್ಕಾರದ ಶಿಫಾರಸುಗಳಿಗೆ ಬುಧವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ನೀಡಲಾ ಗಿದೆ. ಈ ಬಗ್ಗೆ ಇನ್ನೂ ಕೌನ್ಸಿಲ್‌ ಸಭೆ ಯಲ್ಲಿ ಚರ್ಚೆ ನಡೆಯಬೇಕಿದೆ. ಹೀಗಾಗಿ ಈ ಕೂಡಲೇ ವಾಹನ ನಿಲುಗಡೆ ನೀತಿ ಜಾರಿಗೆ ಬರುವುದಿಲ್ಲ’ ಎಂದರು.

‘ಪಾಲಿಕೆ ನಿಯಮಗಳ ಪ್ರಕಾರ ಯಾವುದೇ ವಿಷಯಕ್ಕೆ ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿದ ನಂತರ, ಮೂರು ತಿಂಗಳವರೆಗೆ ಆ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವಂತಿಲ್ಲ. ಮೂರು ತಿಂಗಳ ವರೆಗೂ ಕಾಲಾವಕಾಶವಿರುವುದರಿಂದ ರಾಜ್ಯ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಲೂಬಹುದು’ಎಂದರು.

ಶುಲ್ಕ ವಿರೋಧಿಸಿ ಬೈಕ್‌ ರ‍್ಯಾಲಿ
ಬಿಬಿಎಂಪಿ ಜಾರಿಗೆ ತರಲು ಮುಂದಾ ಗಿರುವ ನೂತನ ವಾಹನ ನಿಲುಗಡೆ ನೀತಿಯನ್ನು ಕೈಬಿಡಬೇಕೆಂದು ಒತ್ತಾ ಯಿಸಿ ಯುವ ಕಾಂಗ್ರೆಸ್‌ ನಗರ ಘಟಕದ ಸದಸ್ಯರು ಆನಂದರಾವ್‌ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಯಿಂದ ಬಿಬಿಎಂಪಿ ಕೇಂದ್ರ ಕಚೇರಿವರೆಗೆ ಶನಿವಾರ  ಬೈಕ್‌ ರ‍್ಯಾಲಿ ನಡೆಸಿದರು.

ಮೇಯರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ ಸದಸ್ಯರು, ಯಾವುದೇ ಕಾರಣಕ್ಕೂ ನಗರಕ್ಕೆ ವಾಹನ ನಿಲುಗಡೆ ನೀತಿ­ಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಮನೋಹರ್‌, ‘ನೂತನ ವಾಹನ ನಿಲುಗಡೆ ಶುಲ್ಕ ನೀತಿ ಜಾರಿಗೆ
ತರುವುದ­ರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಗಂಟೆ ಆಧಾರದಲ್ಲಿ ಶುಲ್ಕ ವಿಧಿಸುವುದರಿಂದ ಜನರನ್ನು ಲೂಟಿ ಮಾಡಿ­ದಂತಾಗು ತ್ತದೆ. ಹೀಗಾಗಿ ಈ ನೂತನ ನೀತಿಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಕಸ, ಚರಂಡಿ ಹೂಳು ತೆಗೆಯಲು ಸೂಚನೆ
ಬೆಂಗಳೂರು:
ಮಲ್ಲೇಶ್ವರದ ವಿವಿಧ ಭಾಗಗಳಿಗೆ  ಶನಿವಾರ ಭೇಟಿ ನೀಡಿ ಸಾಮೂಹಿಕ ಸ್ಚಚ್ಛತಾ ಆಂದೋಲನದ ಪರಿಶೀಲನೆ ನಡೆಸಿದ ಮೇಯರ್‌ ಬಿ.ಎಸ್‌.­ಸತ್ಯನಾರಾಯಣ, ನಗರದ ವಿವಿಧ ಕಡೆ ಸಂಗ್ರಹವಾಗಿರುವ ಕಸ ಹಾಗೂ ಚರಂಡಿಗಳ ಹೂಳು ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ರಸ್ತೆಬದಿಯಲ್ಲಿ ಸುರಿದಿರುವ ಕಟ್ಟಡ ಅವಶೇಷ ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಬೇಕು. ಮುಖ್ಯರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಶುಚಿಗೊಳಿಸಬೇಕು. ರಸ್ತೆ ಪಕ್ಕದಲ್ಲಿರುವ ಚರಂಡಿಗಳ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ನಗರದ ಎಲ್ಲ ವಲಯಗಳಲ್ಲೂ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ನಗರದ ಬೇರೆ ಬೇರೆ ವಾರ್ಡ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಸ್ವಚ್ಛತೆಯ ಪ್ರಗತಿಯನ್ನು ಪರಿಶೀಲಿಸ­ಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.