ADVERTISEMENT

ಕ್ಯಾನ್ಸರ್ ಚಿಕಿತ್ಸಾ ತಂತ್ರಜ್ಞಾನ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:55 IST
Last Updated 10 ಫೆಬ್ರುವರಿ 2011, 19:55 IST

ಬೆಂಗಳೂರು: ಕ್ಯಾನ್ಸರ್ ರೋಗಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ತಾಂತ್ರಿಕ ನೆರವಿಗೆ ಸಂಬಂಧಪಟ್ಟಂತೆ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ (ಎಚ್‌ಸಿಜಿ) ಸಂಸ್ಥೆಯ ಬೆಂಗಳೂರು ಘಟಕವು ಸೀಮೆನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕ್ಯಾನ್ಸರ್‌ನಿಂದ ಬಳಲುವವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಮುಂದಾಗಿದೆ.

‘ಈಚಿನ ವರ್ಷಗಳಲ್ಲಿ ದೇಶದಲ್ಲಿ ಕ್ಯಾನ್ಸರ್‌ಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗುಣಪಡಿಸುವ ಸುಧಾರಿತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಸೀಮೆನ್ಸ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ’ ಎಂದು ಎಚ್‌ಸಿಜಿ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಸ್. ಅಜಯ್‌ಕುಮಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಮೊದಲು ವಿದೇಶಿ ಸಂಸ್ಥೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ವೈದ್ಯಕೀಯ ಸಂಸ್ಥೆಗಳಿಗೆ ತಾಂತ್ರಿಕ ನೆರವು ನೀಡಲು ಆಸಕ್ತಿ ತೋರುತ್ತಿರಲಿಲ್ಲ. ಈ ತಂತ್ರಜ್ಞಾನಕ್ಕೆ ಪೂರಕವಾದ ಮೂಲ ಸೌಕರ್ಯವಿರಲಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದವು. ಆದರೆ ಇದೀಗ ವಿದೇಶಿ ಕಂಪೆನಿಗಳು ಭಾರತದ ಪ್ರತಿಷ್ಠಿತ ಆಸ್ಪತ್ರೆಗೆ ತಾಂತ್ರಿಕ ನೆರವು ನೀಡಲು ಮುಂದಾಗಿವೆ’ ಎಂದರು.

‘ಅದರಂತೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸುವುದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್, ತಾಂತ್ರಿಕ ಉಪಕರಣಗಳು, ಹೊಸ ತಂತ್ರಜ್ಞಾನದ  ಸಂಶೋಧನೆ, ಅಭಿವೃದ್ಧಿಗೆ ಸೀಮೆನ್ಸ್ ಕಂಪೆನಿ ತಾಂತ್ರಿಕ ನೆರವು ನೀಡಲಿದೆ.  ಈ ಉಪಕರಣಗಳ ಬಗ್ಗೆ ತರಬೇತಿ ಸಹ ನೀಡಲಿದೆ. ಕ್ಯಾನ್ಸರ್ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ’ ಎಂದರು. ಸೀಮೆನ್ಸ್ ಕಂಪೆನಿಯ ಆರೋಗ್ಯ ವಿಭಾಗದ  ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಡಾ. ಬರ್ನ್ಡ್ ಮೋಂಟ್ಯಾಗ್, ಸೀಮೆನ್ಸ್ ಸಂಸ್ಥೆ ಆರೋಗ್ಯ ವಿಭಾಗದ ಭಾರತ ಘಟಕದ ಮುಖ್ಯಸ್ಥ ರಾಘವನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.