ADVERTISEMENT

ಕ್ರಿಕೆಟಿಗರಿಗೆ ಸಿಗುವ ಮನ್ನಣೆ ವಿಜ್ಞಾನಿಗಳಿಗಿಲ್ಲ: ಪ್ರೊ.ಯು.ಆರ್.ರಾವ್ ಕಳವಳ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಬೆಂಗಳೂರು: ದೇಶದಲ್ಲಿ ಕ್ರಿಕೆಟಿಗರಿಗೆ ಹಾಗೂ ಸಿನಿಮಾ ಕಲಾವಿದರಿಗೆ ಸಿಗುತ್ತಿರುವಷ್ಟು ಮನ್ನಣೆ ವಿಜ್ಞಾನಿಗಳಿಗೆ ಸಿಗುತ್ತಿಲ್ಲ~ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಯು.ಆರ್.ರಾವ್ ಕಳವಳ ವ್ಯಕ್ತಪಡಿಸಿದರು.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಪಿಇಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕನ್ನಡ ಲೇಖಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಧಾರ್ಮಿಕ ಸಂಘ ಸಂಸ್ಥೆಗಳಿಗೆ ಸಾಕಷ್ಟು ದೇಣಿಗೆ ನೀಡುತ್ತಿದೆ. ಆದರೆ, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರವನ್ನು ಕಡೆಗಣಿಸಿದೆ. ವಿಜ್ಞಾನದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬ ಸತ್ಯ ಸಂಗತಿಯನ್ನು ಸರ್ಕಾರ ಮರೆಯಬಾರದು. ವೈಜ್ಞಾನಿಕ ಸಂಶೋಧನಾ ಕಾರ್ಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.

ADVERTISEMENT

ಸರ್ಕಾರ ಮತಗಳಿಕೆ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕೆಲಸ ಮಾಡುತ್ತಿದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ 55 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತಿತ್ತು. ಪ್ರಸ್ತುತ 235 ದಶಲಕ್ಷ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಈ ಹಿಂದೆ ದೇಶವು ಸೂಜಿಯಂತಹ ಸಣ್ಣಪುಟ್ಟ ವಸ್ತುಗಳಿಗೂ ಮತ್ತೊಂದು ದೇಶದ ಮೇಲೆ ಅವಲಂಬಿತವಾಗಿತ್ತು. ಈಗ ಬಾಹ್ಯಾಕಾಶ ಸಂಶೋಧನೆ, ಕೈಗಾರಿಕೋದ್ಯಮ, ಅಣು ಶಕ್ತಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ದೇಶ ಸಾಕಷ್ಟು ಮುಂದುವರಿದಿದೆ. ಮಾಜಿ ಪ್ರಧಾನಿ ನೆಹರು ಅವರ ದೂರದರ್ಶಿತ್ವ ಹಾಗೂ ವಿಜ್ಞಾನದ ಫಲವಾಗಿ ಇದೆಲ್ಲ ಸಾಧ್ಯವಾಯಿತು ಎಂದು ಹೇಳಿದರು.

ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯ ನಂತರ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು. ಪ್ರಸ್ತುತ ದೇಶವು ಹಾಲಿನ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ಅಂತೆಯೇ ಅಕ್ಕಿ, ಗೋಧಿ ಉತ್ಪಾದನೆಯಲ್ಲಿ ಕ್ರಮವಾಗಿ ಎರಡು ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಸೌರಶಕ್ತಿಯ ಸದ್ಬಳಕೆ ಮತ್ತು ಕೃಷಿ ವಿಜ್ಞಾನದಲ್ಲಿ ಹಿಂದುಳಿದಿದೆ. ಆದ್ದರಿಂದ ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಜನಪರವಾದ ಸಂಶೋಧನಾ ಕಾರ್ಯ ಚಟುವಟಿಕೆಗಳು ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ಲೇಖಕರಾದ ಡಾ.ಪಿ.ನಾರಾಯಣಸ್ವಾಮಿ, ಬಿ.ಎಸ್.ಸೋಮಶೇಖರ, ಡಾ.ಜೆ.ಬಾಲಕೃಷ್ಣ, ಡಾ.ಎಚ್.ಆರ್.ಕೃಷ್ಣಮೂರ್ತಿ, ಟಿ.ಜಿ.ಶ್ರೀನಿಧಿ ಮತ್ತು ಜಿ.ಐ.ಭಟ್ ಅವರಿಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2011-12ನೇ ಸಾಲಿನ ಶ್ರೇಷ್ಠ ಲೇಖಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅಕಾಡೆಮಿ ಸದಸ್ಯ ಪ್ರೊ.ಎಂ.ಆರ್.ಗಜೇಂದ್ರಗಡ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ತಾಂತ್ರಿಕ) ನಿರ್ದೇಶಕ ಡಾ.ಎಚ್.ಹೊನ್ನೇಗೌಡ, ಪಿಇಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಕೆ.ಎನ್.ಬಾಲಸುಬ್ರಹ್ಮಣ್ಯ ಮೂರ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.