ADVERTISEMENT

ಕ್ರಿಕೆಟ್‌ ಪಂದ್ಯಾವಳಿ: ಮೆಟ್ರೊ ಸಂಚಾರ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:30 IST
Last Updated 12 ಏಪ್ರಿಲ್ 2018, 19:30 IST
ಕ್ರಿಕೆಟ್‌ ಪಂದ್ಯಾವಳಿ: ಮೆಟ್ರೊ ಸಂಚಾರ ಅವಧಿ ವಿಸ್ತರಣೆ
ಕ್ರಿಕೆಟ್‌ ಪಂದ್ಯಾವಳಿ: ಮೆಟ್ರೊ ಸಂಚಾರ ಅವಧಿ ವಿಸ್ತರಣೆ   

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಪಂದ್ಯಾವಳಿ ಪ್ರಯುಕ್ತ ಬೆಂಗಳೂರು ಮೆಟ್ರೊ ರೈಲು ನಿಗಮವು ಮೆಟ್ರೊ ರೈಲುಗಳ ಸಂಚಾರವನ್ನು ಏಪ್ರಿಲ್‌ 13, 21, 25,29, ಮೇ 1 ಹಾಗೂ 17ರಂದು ರಾತ್ರಿ 11ರಿಂದ 12.30ರವರೆಗೆ ವಿಸ್ತರಿಸಿದೆ.

ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದವರೆಗೆ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರ ನಿಲ್ದಾಣದವರೆಗೆ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಕೊನೆಯ ರೈಲು ಕಬ್ಬನ್‌ ಉದ್ಯಾನ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಹೊರಡಲಿದೆ. ಇದು ನಾಗಸಂದ್ರ ಮತ್ತು ಯಲಚೇನಹಳ್ಳಿ ನಿಲ್ದಾಣಗಳ ಕಡೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್‌) ಸಂಪರ್ಕವನ್ನು ಏರ್ಪಡಿಸುತ್ತದೆ.

ಪೇಪರ್‌ ಟಿಕೆಟ್‌ ಬೆಲೆ ₹50: ಪಂದ್ಯಾವಳಿ ಮುಗಿದ ಬಳಿಕ ಕಬ್ಬನ್‌ ಉದ್ಯಾನ ಮತ್ತು ಮಹಾತ್ಮ ಗಾಂಧಿ ರಸ್ತೆ ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಹಾಗೂ ಚಿಲ್ಲರೆ ಸಮಸ್ಯೆ ನಿವಾರಿಸಲು ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಟಿಕೆಟ್‌ನ ಬೆಲೆ ₹50 ಇದ್ದು, ಯಾವುದೇ ನಿಲ್ದಾಣಗಳಲ್ಲಿ ಖರೀದಿಸಬಹುದು. ಪ್ರತಿದಿನದ ಪಂದ್ಯಾವಳಿಯ ಬಳಿಕ ಕೊನೆಯ ರೈಲು ಸೇವೆಯವರೆಗೆ ಈ ಟಿಕೆಟ್‌ ಅನ್ನು ಮಾನ್ಯ ಮಾಡಲಾಗುತ್ತದೆ. ಇದನ್ನು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸಲು ಉಪಯೋಗಿಸಬಹುದು.

ADVERTISEMENT

ಇದೇ 15ರಂದು ಸಂಜೆ 4ಕ್ಕೆ ಕ್ರಿಕೆಟ್‌ ಪಂದ್ಯಾವಳಿ ಇದ್ದರೂ ಅಂದು ರೈಲು ಸಂಚಾರದ ಅವಧಿಯನ್ನು ವಿಸ್ತರಿಸುವುದಿಲ್ಲ. ಆದರೆ, ಪಂದ್ಯಾವಳಿ ಮುಗಿದ ನಂತರ ವಾಪಸ್‌ ತೆರಳುವುದಕ್ಕಾಗಿ ಈ ಪೇಪರ್‌ ಟಿಕೆಟ್‌ಗಳನ್ನು ಖರೀದಿಸಬಹುದು. ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ಪ್ರಯಾಣಿಕರು ರಿಯಾಯಿತಿ ದರದಲ್ಲೇ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.