ADVERTISEMENT

`ಕ್ಷೇತ್ರದ ಅಭಿವೃದ್ಧಿ: ಕೈಪಿಡಿ ಅಗತ್ಯ'

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 20:00 IST
Last Updated 16 ಡಿಸೆಂಬರ್ 2012, 20:00 IST

ಬೆಂಗಳೂರು: `ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲ ಕೆಲಸಗಳನ್ನು ಮಾಡಲಾಗಿದೆ ಎಂಬ ಮಾಹಿತಿಯನ್ನು ಜನರಿಗೆ ಒದಗಿಸಲು ಶಾಸಕರು ಕೈಪಿಡಿ ಹೊರತರುವ ಅಗತ್ಯವಿದೆ' ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಸಚಿವ ಅರವಿಂದ ಲಿಂಬಾವಳಿ ಅವರು ಹೊರತಂದಿರುವ `ಮಹದೇವಪುರ ಜನಹಿತ' ಕೈಪಿಡಿಯನ್ನು ಈಚೆಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಲಿಂಬಾವಳಿ ಅವರು ಶಾಸಕ ಮತ್ತು ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕ್ಷೇತ್ರವಾದ ಮಹದೇವಪುರದ ಅಭಿವೃದ್ಧಿಗಾಗಿ ನಾಲ್ಕೂವರೆ ವರ್ಷಗಳಲ್ಲಿ ಕೈಗೊಂಡಿರುವ ಸಂಪೂರ್ಣ ಕಾಮಗಾರಿಗಳ ವಿವರ ಈ ಕೈಪಿಡಿಯಲ್ಲಿದೆ. ಇದೇ ರೀತಿ ಪ್ರತಿಯೊಬ್ಬ ಶಾಸಕರು ಅವರ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸಿದರೆ ಉತ್ತಮ' ಎಂದು ಅವರು ಹೇಳಿದರು.

ಸಚಿವ ಲಿಂಬಾವಳಿ ಮಾತನಾಡಿ, `ನನ್ನ ನಾಲ್ಕೂವರೆ ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ಇದಾಗಿದೆ. ಇದರಲ್ಲಿ ಬಹುತೇಕ ಕಾರ್ಯಗಳು ಮುಗಿದಿದ್ದು, ಇನ್ನು ಕೆಲವು ಪ್ರಗತಿಯಲ್ಲಿವೆ' ಎಂದರು. `ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಒಟ್ಟಾರೆ ರೂ 1,248 ಕೋಟಿ ರೂಪಾಯಿ ತಂದಿದ್ದೇನೆ' ಎಂದು ಹೇಳಿದರು.

`ಪ್ರತಿಯೊಬ್ಬ ಪ್ರಜೆಗೂ ಮಾಹಿತಿ ಒದಗಿಸುವ ದೃಷ್ಟಿಯಿಂದ ಈ ಕೈಪಿಡಿ ಅಂತರ್ಜಾಲದಲ್ಲೂ ಸಿಗುವಂತೆ ವ್ಯವಸ್ಥೆ ಮಾಡಿದ್ದೇನೆ. ವೆಬ್‌ಸೈಟ್:  http://arvindlimbavali.com   ಮೂಲಕವೂ ಮಾಹಿತಿ ಪಡೆಯಬಹುದು. ಅದರಲ್ಲಿರುವ ವಿವರಗಳ ಕುರಿತ ಅಭಿಪ್ರಾಯಗಳನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಳ್ಳಬಹುದು' ಎಂದು ತಿಳಿಸಿದರು.

`ಕ್ಷೇತ್ರದಲ್ಲಿ ನಡೆದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಪಾರದರ್ಶಕವಾಗಿದ್ದು, ಯಾರೇ ಹೆಚ್ಚಿನ ಮಾಹಿತಿ ಬಯಸಿದಲ್ಲಿ ನನ್ನ ಸ್ಥಳೀಯ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು' ಎಂದು ಹೇಳಿದರು. `ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ದಿ ಕಾರ್ಯಗಳಾಗಿವೆ' ಎಂದ ಅವರು, `ರಾಜ್ಯದಲ್ಲಿ ಯಾವ ಶಾಸಕರೂ ಈವರೆಗೆ ಅಭಿವೃದ್ದಿ ಕಾರ್ಯಗಳ ಪಟ್ಟಿ ಮಾಡಿಲ್ಲ' ಎಂದರು. 

ಮಹದೇವಪುರ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ, ಬಿಬಿಎಂಪಿ ಸದಸ್ಯ ಎನ್.ಆರ್. ಶ್ರಿಧರ್ ರೆಡ್ಡಿ, ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಪಾಪಣ್ಣ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.