ADVERTISEMENT

ಖಾಲಿಯಾದ ನೀರು; ದುರ್ವಾಸನೆ ಜೋರು

ಒಣಗಿ ನಿಂತಿದೆ ನಗರಕ್ಕೆ ಜೀವಜಲ ಪೂರೈಸುವ ತಿಪ್ಪಗೊಂಡನಹಳ್ಳಿ ಜಲಾಶಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2013, 19:44 IST
Last Updated 24 ಫೆಬ್ರುವರಿ 2013, 19:44 IST
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರು ತಳ ಕಂಡಿದೆ. ಅಳಿದುಳಿದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ದುರ್ವಾಸನೆ ಬೀರುತ್ತಿದೆಪ್ರಜಾವಾಣಿ ಚಿತ್ರಗಳು: ವಿಶ್ವನಾಥ ಸುವರ್ಣ
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನೀರು ತಳ ಕಂಡಿದೆ. ಅಳಿದುಳಿದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ದುರ್ವಾಸನೆ ಬೀರುತ್ತಿದೆಪ್ರಜಾವಾಣಿ ಚಿತ್ರಗಳು: ವಿಶ್ವನಾಥ ಸುವರ್ಣ   

ತಿಪ್ಪಗೊಂಡನಹಳ್ಳಿ: ಬೆಂಗಳೂರು ನಗರಕ್ಕೆ ನೀರು ಪೂರೈಸುವ ಇಲ್ಲಿಯ ಚಾಮರಾಜ ಸಾಗರ ಜಲಾಶಯ ಕಳೆದ ಎರಡು ತಿಂಗಳಿನಿಂದ ನೀರಿಲ್ಲದೆ ಬಿಕ್ಕಳಿಸುತ್ತಿದೆ. ತಗ್ಗು ಪ್ರದೇಶದಲ್ಲಿ ಅಲ್ಲಿಷ್ಟು, ಇಲ್ಲಿಷ್ಟು ನಿಂತ ನೀರು ಪಾಚಿಗಟ್ಟಿದೆ. ಹಸಿರು ಬಣ್ಣಕ್ಕೆ ತಿರುಗಿದ ನೀರಿನ ಹತ್ತಿರಕ್ಕೆ ಹೋದರೆ ಗಬ್ಬು ನಾತ ಹೊಡೆಯುತ್ತದೆ. ಜಲಾಶಯದ ಕೆಳಭಾಗದ ಶುದ್ಧೀಕರಣ ಘಟಕಗಳು ಹನಿ ನೀರಿಲ್ಲದೆ ಒಣಗಿ ನಿಂತಿವೆ.

ಎಲ್ಲಕ್ಕಿಂತ ಹೆಚ್ಚಾಗಿ ಬೆಂಗಳೂರಿಗೆ ನೀರು ಸಾಗಿಸುತ್ತಿದ್ದ ಇಲ್ಲಿನ ಪೈಪುಗಳು ಈಗ ಬೆಂಗಳೂರಿನಿಂದಲೇ ಹಿಮ್ಮುಖವಾಗಿ ಕಾವೇರಿ ನೀರು ಪಡೆದು, ತಿಪ್ಪಗೊಂಡನಹಳ್ಳಿ, ಸುತ್ತಲಿನ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿವೆ. ಜಲಾಶಯದ ದಾರುಣ ಸ್ಥಿತಿಗೆ ಈ ಸನ್ನಿವೇಶಗಳೇ ಕನ್ನಡಿ ಹಿಡಿಯುತ್ತವೆ.

`ನಮಗೆ ತಿಳಿದಮಟ್ಟಿಗೆ ಜಲಾಶಯದಲ್ಲಿ ಈ ಹಿಂದೆ ಎಂದಿಗೂ ನೀರು ಇಷ್ಟು ಕಡಿಮೆ ಆಗಿರಲಿಲ್ಲ. 2007ರಲ್ಲೂ ನೀರಿನ ಅಭಾವ ಎದುರಾಗಿತ್ತು. ಆದರೆ, ಇಷ್ಟೊಂದು ಭೀಕರ ಸ್ವರೂಪ ಪಡೆದಿರಲಿಲ್ಲ. ಎಂತಹ ಕಡು ಬೇಸಿಗೆಯಲ್ಲೂ ನಾಲ್ಕಾರು ಅಡಿ ನೀರು ಇರುತ್ತಿತ್ತು' ಎಂದು ಅಳಿದುಳಿದ ನೀರಿನಲ್ಲಿಯೇ ಮೀನಿಗೆ ಗಾಳ ಹಾಕಿ ಕುಳಿತಿದ್ದ ಗ್ರಾಮದ ತಾತ ವೆಂಕಟ ಹನುಮಯ್ಯ ಹೇಳುತ್ತಾರೆ.

ಅರ್ಕಾವತಿ ಮತ್ತು ಕುಮುದಾವತಿ ನದಿಗಳು ಸಂಗಮಿಸುವ ಅತ್ಯಂತ ಪ್ರಶಸ್ತ ಸ್ಥಳದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಈ ಜಲಾಶಯ ಕಟ್ಟಿದ್ದಾರೆ. 1933ರ ಲಾಗಾಯ್ತಿನಿಂದಲೂ ಇದು ಬೆಂಗಳೂರಿನ ನೀರಿನ ದಾಹವನ್ನು ತಣಿಸುತ್ತಾ ಬಂದಿದೆ. ಇಂಗ್ಲೆಂಡಿನ ಕಂಪೆನಿ ತಯಾರಿಸಿಕೊಟ್ಟ ಸರಿದಾಡುವ ಲೋಹದ ಪ್ಲೇಟ್‌ಗಳನ್ನು ಈ ಜಲಾಶಯದ ಗೇಟ್‌ಗಳಿಗೆ ಅಳವಡಿಸಲಾಗಿದೆ. ಈ ಪ್ಲೇಟ್‌ಗಳನ್ನು ಬಾಜು ಸರಿಸಲು ಸುಲಭ ತಂತ್ರಜ್ಞಾನ ಅಳವಡಿಸಲಾಗಿದೆ.

ಒಬ್ಬನೇ ವ್ಯಕ್ತಿ ಇದ್ದರೂ ಜಲಾಶಯದಲ್ಲಿ ತುರ್ತು ಸಂದರ್ಭ ನಿರ್ವಅಣೆ ಮಾಡಲು ಸಾಧ್ಯ ಇರುವಂತೆ ವ್ಯವಸ್ಥೆ ರೂಪಿಸಲಾಗಿದೆ. ಶುದ್ಧೀಕರಣದ ಯಂತ್ರಗಳನ್ನೂ ಇಂಗ್ಲೆಂಡಿನಿಂದ ಹಡಗಿನ ಮೂಲಕ ತಂದು ಅಳವಡಿಸಲಾಗಿದೆ. ವೃತ್ತಾಕಾರದ ಶುದ್ಧೀಕರಣ ಘಟಕಗಳಲ್ಲಿ ತಿರುಗುವ ಗಾಣದ ಕೊಳವೆಗಳು ತ್ಯಾಜ್ಯಕ್ಕೆ ಗಾಳ ಹಾಕುತ್ತವೆ.

ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಮಾಗಡಿ ಮತ್ತು ಬೆಂಗಳೂರು ಭಾಗದ 1,453 ಚದರ ಕಿ.ಮೀ. ಜಲಾನಯನ ಪ್ರದೇಶವನ್ನು ಈ ಜಲಾಶಯ ಹೊಂದಿದೆ. 3 ಕಡೆಗಳಿಂದ ಇಲ್ಲಿಗೆ ನೀರು ಹರಿದು ಬರುತ್ತದೆ. ಮೊದಲು ನಿತ್ಯ 27 ದಶಲಕ್ಷ ಲೀಟರ್ ನೀರು ಪೂರೈಸುತ್ತಿದ್ದ ಚಾಮರಾಜ ಸಾಗರ, ತನ್ನ ಸಾಮರ್ಥ್ಯವನ್ನು ನಿತ್ಯ 135 ದಶಲಕ್ಷ ಲೀಟರ್ ನೀರು ಸರಬರಾಜು ಮಾಡುವ ಹಂತಕ್ಕೆ ವಿಸ್ತರಿಸಿಕೊಂಡಿದೆ. ಇಂತಹ ಜಲಾಶಯ ಬತ್ತಿ ನಿಂತಿರುವುದು ಜಲ ಮಂಡಳಿಗೆ ಕಳವಳ ಉಂಟು ಮಾಡಿದೆ. ಕಳೆದ ಎರಡು ತಿಂಗಳಿಂದ ಇಲ್ಲಿಂದ ನೀರು ಎತ್ತುವ ಪ್ರಕ್ರಿಯೆಯನ್ನು ಜಲ ಮಂಡಳಿ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ತಿಪ್ಪಗೊಂಡನಹಳ್ಳಿ ಘಟಕದಲ್ಲಿ ಜಲ ಮಂಡಳಿಯು ಗುತ್ತಿಗೆ ಆಧಾರಿತ ಕಾರ್ಮಿಕರನ್ನೂ ಒಳಗೊಂಡಂತೆ ಒಟ್ಟಾರೆ 96 ಜನ ಸಿಬ್ಬಂದಿಯನ್ನು ಹೊಂದಿದೆ. ಆದರೆ, ನೀರಿಲ್ಲದ ಕಾರಣ ಅವರಿಗೆ ಕೆಲಸವೂ ಇಲ್ಲದಂತಾಗಿದೆ. ಅವರನ್ನೆಲ್ಲ ಬೆಂಗಳೂರಿನಲ್ಲಿ ಬಾಕಿ ವಸೂಲಿಗೆ ನಿಯೋಜನೆ ಮಾಡಿದ್ದರಿಂದ ನಿತ್ಯ 70 ಕಿ.ಮೀ. ದೂರ ಓಡಾಡಬೇಕಿದೆ.

ಜಲಾಶಯಕ್ಕೆ `ಪ್ರಜಾವಾಣಿ' ಭೇಟಿ ನೀಡಿದಾಗ ನೀರಿಲ್ಲದೆ ನಿಂತ ಅದರ ಪಾತ್ರದಲ್ಲಿ ಬೆಳೆದ ಹುಲ್ಲನ್ನು ಹಸುಗಳು ಹಾಯಾಗಿ ಮೇಯುತ್ತಾ ನಿಂತಿದ್ದವು. ಮಳೆಗಾಲದ ಸಂದರ್ಭದಲ್ಲಿ ಜಲ ಸಮಾಧಿ ಹೊಂದಿರುತ್ತಿದ್ದ ಜೋಡಿ ದೇಗುಲಗಳು ಬಿಸಿಲಿಗೆ ಮೈಯೊಡ್ಡಿ ನಿಂತಿದ್ದವು. ಜಲಾಶಯದ ಪಾತ್ರದಲ್ಲೇ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಣುತ್ತಿತ್ತು. ನೀರಿನ ಆಳದಲ್ಲಿ ಮುಳುಗಿರುತ್ತಿದ್ದ ಕಲ್ಲಿನ ದಿನ್ನೆಗಳು, ಮರಗಳ ಅವಶೇಷಗಳು ಪ್ರತ್ಯಕ್ಷವಾಗಿದ್ದವು.

ಜಲಾಶಯಕ್ಕೆ ನೀರು ತರುವ ಪ್ರದೇಶಗಳೆಲ್ಲ ಅತಿಕ್ರಮಣಗೊಂಡು ಬಡಾವಣೆಗಳು ತಲೆ ಎತ್ತಿದ್ದರಿಂದ ಮೊದಲಿನಂತೆ ಈಗ ನೀರು ಸರಾಗವಾಗಿ ಹರಿದು ಬರುವುದಿಲ್ಲ ಎಂದು ತಿಪ್ಪಗೊಂಡನಹಳ್ಳಿ ಜನ ಹೇಳುತ್ತಾರೆ. 1980 ಮತ್ತು 90ರ ದಶಕದಲ್ಲಿ ಜಲಾಶಯ ಯಾವಾಗಲೂ ತುಂಬಿ ತುಳುಕುತ್ತಿತ್ತು. ಮಳೆಗಾಲದಲ್ಲಿ ಎಲ್ಲ ಏಳೂ ಗೇಟುಗಳನ್ನು ತೆರೆಯಬೇಕಿತ್ತು. ಈಗಿನ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ ಎಂದು ವಯೋವೃದ್ಧ ರಾಮಯ್ಯ ವಿವರಿಸುತ್ತಾರೆ.

ಅರ್ಕಾವತಿ ದಂಡೆಯ ಮೇಲೆ ಪೀಣ್ಯ ಕೈಗಾರಿಕಾ ಪ್ರದೇಶವೂ ಬರುವುದರಿಂದ ಕಾರ್ಖಾನೆಯಲ್ಲಿ ಬಳಸಿದ ಕಲ್ಮಶ ನೀರೂ ಇಲ್ಲಿಗೆ ಹರಿದು ಬರುತ್ತದೆ. ನೀರಿನಿಂದ ಗಬ್ಬುವಾಸನೆ ಬರಲು ಅದಕ್ಕೆ ಸೇರಿದ ಕಲ್ಮಶ ಮತ್ತು ರಾಸಾಯನಿಕಗಳೇ ಕಾರಣ. ಈ ಭಾಗದಲ್ಲಿ ಅಂತರ್ಜಲ ಸಹ ಕಲುಷಿತಗೊಂಡಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಜಲಾಶಯದ ಪಾತ್ರದಲ್ಲಿ ಮರಳು ದಂಧೆ ಕೂಡ ನಡೆದಿದ್ದು, ಹೂಳು ಸಹ ವೇಗವಾಗಿ ತುಂಬುತ್ತಿದೆ. ಈ ವಿಷಯವಾಗಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅತಿಕ್ರಮಣದ ಕಾರುಬಾರೂ ಜೋರಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಯಾವ ಕ್ರಮ ಕೈಗೊಂಡಿಲ್ಲ ಎಂದು ಜಲ ಮಂಡಳಿ ಸಿಬ್ಬಂದಿ ಮುನಿಸು ತೋರುತ್ತಾರೆ.

`ಚಾಮರಾಜ ಸಾಗರದಲ್ಲಿ ತುಂಬಿರುವ ಹೂಳನ್ನು ತೆಗೆದರೆ ಅದರ ಸಂಗ್ರಹಣಾ ಸಾಮರ್ಥ್ಯ ಮತ್ತೂ ಹೆಚ್ಚಲಿದೆ. ಇದ್ದ ಸಂಪನ್ಮೂಲ ಸರಿಯಾಗಿ ಬಳಕೆ ಮಾಡಿಕೊಳ್ಳದೆ ಹೊಸ ಯೋಜನೆಗಳ ಕಡೆಗೆ ಕಣ್ಣು ಹಾಕುವುದು ಏಕೊ' ಎಂದು ಪ್ರಶ್ನೆ ಹಾಕುತ್ತಾರೆ. ಎಲ್ಲ ಏಟುಗಳ ನಡುವೆ ಜಲಾಶಯ ಮಾತ್ರ ಮಳೆಯ ಆಗಮನಕ್ಕಾಗಿ ಕಾಯುತ್ತಿದೆ.

ತಳಕಚ್ಚಿದ ನೀರಿನಲ್ಲಿ ಮೀನಿಗೆ ಗಾಳ
ಚಾಮರಾಜ ಸಾಗರ ಜಲಾಶಯ ಕೇವಲ ಕುಡಿಯುವ ನೀರಿನ ಮೂಲವಾಗಿರದೆ ಮೀನುಗಾರಿಕೆ ತಾಣವೂ ಆಗಿದೆ. 33 ಜನ ಮೀನುಗಾರರು ಇಲ್ಲಿ ಮೀನು ಹಿಡಿಯಲು ಸರ್ಕಾರದಿಂದ ಲೈಸನ್ಸ್ ಪಡೆದಿದ್ದಾರೆ. ಸಣ್ಣ ನೀರಾವರಿ ಇಲಾಖೆ ಪಕ್ಕದ ಹಳ್ಳಿಗರಿಗೆ ಬಿಟ್ಟು ಬೇರೆಯವರಿಗೆ ಗುತ್ತಿಗೆ ನೀಡಲು ಮುಂದಾದಾಗ ಕೋರ್ಟ್ ಮೆಟ್ಟಿಲೇರಿದ್ದ ಸ್ಥಳೀಯರು ತಮ್ಮ ಪರವಾದ ತೀರ್ಪು ತರಲು ಯಶಸ್ವಿಯಾಗಿದ್ದರು. ಅಳಿದುಳಿದ ನೀರಿನಲ್ಲಿಯೇ ಈಚೆಗೆ ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ್ನು ಬಿಡಲಾಗಿದೆ. ನೀರಿನ ಅಭಾವ ಇದ್ದರೂ ಮೀನುಗಾರಿಕೆ ಮಾತ್ರ ಯಥಾಪ್ರಕಾರ ನಡೆದಿದೆ. ರುಚಿಯಾದ ಮೀನು ಖರೀದಿಗಾಗಿ ಜನ ಜಲಾಶಯದವರೆಗೆ ಬರುತ್ತಾರೆ.

ಹಕ್ಕಿಗಳ ಬಿಡಾರ; ವಿಹಾರ ತಾಣ
ಚಾಮರಾಜ ಸಾಗರ ಜಲಾಶಯದಲ್ಲಿ ತರಾವರಿ ಹಕ್ಕಿಗಳ ಹಿಂಡೇ ಇದೆ. ಪಕ್ಷಿಪ್ರಿಯರು ಅವುಗಳ ವೀಕ್ಷಿಸಲು ಮತ್ತು ಛಾಯಾಚಿತ್ರ ತೆಗೆಯಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಬೆಳಗಿನ ಹೊತ್ತು ಹತ್ತಾರು ವಿಧದ ಹಕ್ಕಿಗಳ ಹಿಂಡು ಇಲ್ಲಿ ವಿಹಾರ ಮಾಡುತ್ತದೆ ಎಂದು ಜಲ ಮಂಡಳಿ ಕಾವಲುಗಾರ ಎನ್.ಲಕ್ಷ್ಮ ಹೇಳುತ್ತಾರೆ. ವಾರಾಂತ್ಯದ ವಿಹಾರಕ್ಕೆ ಈ ಜಲಾಶಯ ಹೇಳಿ ಮಾಡಿಸಿದ ತಾಣವಾಗಿದ್ದು, ಜನ ಊಟ ಕಟ್ಟಿಕೊಂಡು ಕಾಲ ಕಳೆಯಲು ಇಲ್ಲಿಗೆ ಬರುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.